ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಾಲ್ಕನೇ ಹಂತದ ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂದರೂ ಕೂಡ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಲಾಕ್ ಡೌನ್ 5.0 ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮೇ 31ಕ್ಕೆ ಲಾಕ್ ಡೌನ್ 4.0 ಮುಗಿಯಲಿದ್ದು, ಇನ್ನೂ ಎರಡುವಾರಗಳ ಕಾಲ ಲಾಕ್‍ಡೌನ್ ಅವಧಿ ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಜೂನ್ 1ರಿಂದ 14ರ ವರೆಗೂ ಲಾಕ್‍ಡೌನ್ ವಿಸ್ತರಣೆ ಆಗಲಿದ್ದು ಮೇ 31ರ ‘ಮನ್ ಕೀ ಬಾತ್’ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಐದನೇ ಹಂತದ ಲಾಕ್‍ಡೌನ್ ಸಿದ್ಧತೆಯಲ್ಲಿರುವ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆ ಮೂಲಕ 11 ನಗರಗಳನ್ನು ಗುರುತಿಸಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನೈ, ಅಹಮಾದಾಬಾದ್, ಕೊಲ್ಕತ್ತಾ, ಪುಣೆ, ಥಾಣೆ, ಜೈಪುರ್, ಸೂರತ್ ಮತ್ತು ಇಂದೋರ್ ನಲ್ಲಿ ದೇಶದಲ್ಲಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.70 ರಷ್ಟು ಸೋಂಕಿತರಿದ್ದು ಇಲ್ಲಿ ವಿಶೇಷ ಮುತುವರ್ಜಿ ವಹಿಸುವ ಸಾಧ್ಯತೆ ಇದೆ. ಹೀಗಾಗಿ 11 ನಗರಗಳ ಕಮಿಷನರ್ ಗಳ ಜೊತೆಗೂ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಚರ್ಚೆ ನಡೆಸಲಿದ್ದಾರೆ.
5ನೇ ಹಂತದ ಲಾಕ್‍ಡೌನ್ ನಲ್ಲಿ ಮಾಲ್, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಆನ್ಲೈನ್ ದೂರ ಶಿಕ್ಷಣ ಹೊರತಾದ ಶಾಲಾ- ಕಾಲೇಜು ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳು, ಬೃಹತ್ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆ, ಉತ್ಸವದಂತಹ ಹೆಚ್ಚು ಜನರು ಸೇರುವ ಪ್ರದೇಶ ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ