
ಪ್ರಗತಿವಾಹಿನಿ ಸುದ್ದಿ; ಗದಗ: ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ ರೀತಿಯೇ ಅವೈಜ್ಞಾನಿಕವಾಗಿದೆ. ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿ ಲಾಕ್ಡೌನ್ ಜಾರಿ ಮಾಡಿದ್ದರಿಂದ ಕೋಟ್ಯಾಂತರ ಜನರಿಗೆ ಸಮಸ್ಯೆಯಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ 1947ರ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳು ಮರುಕಳಿಸುವಂತಾಗಿದೆ. ಜನ ಸಾರಿಗೆ ವ್ಯವಸ್ಥೆ ಇಲ್ಲದೆ ಸಾವಿರಾರು ಕಿಲೋ ಮೀಟರ್ ನಡೆದುಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಪ್ಪತಗುಡ್ಡ ರಕ್ಷಣೆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಗತ್ಯ ಕ್ರಮ ಕೈಗೊಂಡಿತ್ತು. ಆದರೆ ಇದೀಗ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಗಣಿಗಾರಿಕೆಗೆ ಮುಕ್ತ ಅವಕಾಶ ನೀಡುವ ಮೂಲಕ ಮತ್ತೆ ಪರಿಸರಕ್ಕೆ ಮಾರಕವಾಗುತ್ತಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೋಲನವೊಂದೇ ಈಗ ಕಪ್ಪತಗುಡ್ಡ ರಕ್ಷಣೆಗೆ ಇರುವ ಪರಿಹಾರ ಇದಕ್ಕೆ ಕಾಂಗ್ರೆಸ್ ಕೂಡ ಬೆಂಬಲ ನೀಡಲಿದೆ ಎಂದು ಹೇಳಿದರು.
ಇದೇ ವೇಳೆ ಜೂನ್ 7ರಂದು ಸರಳವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮೂವರು ಕಾರ್ಯಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪದಗ್ರಹಣ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ