ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣ ಇದೀಗ ಲಾಕಪ್ ಡೆತ್ ಆರೋಪ ಕೇಳಿಬಂದಿದ್ದು, ಆರೋಪಿ ಸಂಬಂಧಿಕರು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಶುಕ್ರವಾರ ಚನ್ನಗಿರಿ ಪೊಲೀಸರು ಆದಿಲ್ ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದ. ವಿಷ ತಿಳಿಯುತ್ತಿದ್ದಂತೆ ತಡರಾತ್ರಿ ಪೊಲೀಸ್ ಠಾಣೆಗೆ ಧಾವಿಸಿದ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದು, 11 ಪೊಲೀಸರು ಗಾಯಗೊಂಡಿದ್ದಾರೆ.
ಪೊಲಿಸ್ ವಾಹನಗಳನ್ನು ಜಖಂ ಗೊಳಿಸಿದ್ದಾರೆ. ಗಾಯಾಳು ಪೊಲೀಸರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್,ಮೃತ ಆದಿಲ್ ನನ್ನು ಶುಕ್ರವಾರ ಪೊಲೀಸರು ಠಾಣೆಗೆ ಕರೆತಂದಿದ್ದರು. ಠಾಣೆಗೆ ಬಂದ ತಕ್ಷಣ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಆದಿಲ್ ಪೊಲೀಸ್ ಠಾಣೆಯಲ್ಲಿ 6-7 ನಿಮಿಷ ಕೂಡ ಇರಲಿಲ್ಲ. ಆದರೂ ಸಂಬಂಧಿಕರು ಲಾಕಪ್ ಡೆತ್ ಎನ್ನುತ್ತಿದ್ದಾರೆ. ಸಿಸಿಟಿವಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ