
ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರರೊಬ್ಬರು ಲಾಡ್ಜ್ ರೂಮ್ ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಹೂವಿನಹಡಗಲಿ ಪಟ್ಟಣದ ದಾಕ್ಷಾಯಿಣಿ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಉದ್ಯಮಿಯೂ ಆಗಿರುವ ಸಿವಿಲ್ ಗುತ್ತಿಗೆದಾರ ಉಮೇಶ್ ಹೆಗಡೆ (40) ಆತ್ಮಹತ್ಯೆಗೆ ಶರಣಾದವರು.
ಉಮೇಶ್ ಹೆಗಡೆ ಹೂವಿನಹಡಗಲಿ ಪಟ್ಟಣದ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿ ಟೆಂಡರ್ ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಹೂವಿನಹಡಗಲಿಗೆ ಬಂದಿದ್ದ ಉಮೇಶ್ ಹೆಗಡೆ ದಾಕ್ಷಾಯಿಣಿ ಲಾಡ್ಜ್ ನಲ್ಲಿ ವಾಸ್ತವ್ಯ ಮಾಡಿದ್ದರು. ಇಂದು ಬೆಳಿಗ್ಗೆ ಪತ್ನಿ ಹಾಗೂ ಮಗ ಹಲವು ಬಾರಿ ಉಮೇಶ್ ಹೆಗಡೆಗೆ ಫೋನ್ ಕರೆ ಮಾಡಿದರೂ ಫೋನ್ ಸ್ವೀಕರಿಸಿಲ್ಲ. ಆತಂಕಗೊಂಡ ಕುಟುಂಬ ಸದಸ್ಯರು ಲಾಡ್ಜ್ ನವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಈ ವೇಳೆ ಲಾಡ್ಜ್ ಸಿಬ್ಬಂದಿ ರೂಮಿಗೆ ಹೋಗಿ ಬಾಗಿಲು ತಟ್ಟಿದ್ದಾರೆ. ಆದರೂ ಉಮೇಶ್ ಹೆಗಡೆ ಬಾಗಿಲು ತೆರೆದಿಲ್ಲ. ರೂಮಿನ ಬಾಗಿಲು ಒಡೆದು ಪರಿಶೀಲಿಸಿದಾಗ ಕಿಟಕಿಗೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗುತ್ತಿಗೆದಾರ ಉಮೇಶ್ ಹೆಗಡೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.



