ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಾಗಿರುವ 35ಕ್ಕೂ ಹೆಚ್ಚು ಜನರ ಸಮಗ್ರ ಮಾಹಿತಿ ಇಂಟಲಿಜೆನ್ಸ್ ಮೂಲಕ ಸರಕಾರದ ಕೈ ಸೇರಿದೆ.
ಲೋಕಸಭಾ ಉಪಚುನಾವಣೆ ಕಣಕ್ಕಿಳಿಯಲು ಆಸಕ್ತಿ ತೋರಿರುವ ಕ್ಷೇತ್ರದ ಜನರ ಸಮಗ್ರ ಮಾಹಿತಿಯನ್ನು ಇಂಟಲಿಜೆನ್ಸ್ ಪೊಲೀಸರು ಸರಕಾರಕ್ಕೆ ಕಳಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿದ್ಧಪಿಡಿಸಿಕೊಂಡಿರುವ ಇಂಟಲಿಜೆನ್ಸ್ ಅವುಗಳಿಗೆ ತಮ್ಮ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಕೆಲವನ್ನು ಆಕಾಂಕ್ಷಿಗಳಿಂದಲೇ ಉತ್ತರ ಪಡೆದು ಈಗಾಗಲೆ ಕಳುಹಿಸಲಾಗಿದೆ.
ಸಾಮಾನ್ಯವಾಗಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಇಂಟಲಿಜೆನ್ಸ್ ಇಂತಹ ಮಾಹಿತಿಯನ್ನು ಸ್ವಯಂ ಪ್ರೇರಿತವಾಗಿ ಸಂಗ್ರಹಿಸಿ ಸರಕಾರಕ್ಕೆ ಕಳಿಸುತ್ತದೆ. ಈ ಬಾರಿ ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ನಲ್ಲಿ 3 -4 ಜನರ ಹೆಸರು ಕೇಳಿಬರುತ್ತಿದೆ.
ಯಾರ್ಯಾರು ಸ್ಪರ್ಧಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅವರ ಹಿನ್ನೆಲೆಯ ಏನು? ಪಕ್ಷಕ್ಕೆ ಅವರ ಕೊಡುಗೆ ಏನು? ಅವರ ಬೆನ್ನಿಗೆ ಯಾವ ಸಂಸದ, ಯಾವ ಶಾಸಕರಿದ್ದಾರೆ? ಜನ ಬೆಂಬಲ ಹೇಗಿದೆ? ಅವರ ಮೇಲೆ ಕ್ರಿಮಿನಲ್ ಪ್ರಕರಣಗಳೇನಾದರೂ ಇದೆಯೇ?
ಚುನಾವಣೆಗೆ ನಿಂತರೆ ಗೆಲ್ಲುವ ಸಾಧ್ಯತೆ ಎಷ್ಟಿದೆ? ಯಾರಿಗೆ ಟಿಕೆಟ್ ನೀಡಿದರೆ ಉತ್ತಮ? ಆಕಾಂಕ್ಷಿಗಳ ಹೊರತಾಗಿಯೂ ನಿಲ್ಲಿಸಿದರೆ ಗೆಲ್ಲಬಹುದಾದ ಅಭ್ಯರ್ಥಿಗಳು ಬೇರೆ ಯಾರಿದ್ದಾರೆ ಎನ್ನುವ ಎಲ್ಲ ಮಾಹಿತಿಗಳನ್ನು ಇಂಟಲಿಜೆನ್ಸ್ ಸಂಗ್ರಹಿಸುತ್ತದೆ. ಮಾಧ್ಯಮಗಳಲ್ಲಿ ಅವರ ಕುರಿತು ಬಂದಿರುವ ವರದಿಗಳನ್ನು ಸಹ ಕಳಿಸಲಾಗುತ್ತದೆ.
ಪ್ರತಿ ಪಕ್ಷಗಳು ತಮ್ಮದೇ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತವೆ. ಅದರ ಜೊತೆಗೆ ಇಂಟಲಿಜೆನ್ಸ್ ಡಿಪಾರ್ಟ್ ಮೆಂಟ್ ಕಳುಹಿಸುವ ಮಾಹಿತಿಗಳು ಕೂಡ ಅಭ್ಯರ್ಥಿ ಅಂತಿಮಗೊಳಿಸುವ ಸಂದರ್ಭದಲ್ಲಿ ಮಹತ್ವವಾಗಿರುತ್ತವೆ.
ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಜನರು ಚುನಾವಣೆ ಕಣಕ್ಕಿಳಿಯಲು ಆಸಕ್ತಿ ಹೊಂದಿದ್ದಾರೆ. ಕಾಂಗ್ರೆಸ್ ನಲ್ಲಿ ಸಹ 3-4 ಜನರ ಹೆಸರು ಕೇಳಿಬರುತ್ತಿದೆ. ಅವರೆಲ್ಲರ ಮಾಹಿತಿ ಸರಕಾರದ ಬಳಿ ಇರಬೇಕಾಗುತ್ತದೆ. ಅಭ್ಯರ್ಥಿ ಅಂತಿಮಗೊಳಿಸುವಾಗ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ