Belagavi NewsBelgaum NewsKannada NewsKarnataka NewsLatestPolitics

*ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಹಲವು: ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾಂಗಳ ನಿರ್ಮಾಣ, ವಿಶ್ವ ವಿದ್ಯಾಲಯ ಸ್ಥಾಪನೆ ಕಾಂಗ್ರೆಸ್ ಅವಧಿಯಲ್ಲಾಗಿದೆ; ಸಚಿವ ಸತೀಶ್‌ ಜಾರಕಿಹೊಳಿ*

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆ


ಪ್ರಗತಿವಾಹಿನಿ ಸುದ್ದಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್​ 5 ಗ್ಯಾರಂಟಿಗಳನ್ನು ನೀಡಿದೆ. ಕೊವಿಡ್​​, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಹೀಗಾಗಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಅಥಣಿ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ಕ್ಷೇತ್ರಗಳಿಗಾಗಲಿ ಅಥವಾ ರಾಜ್ಯದಲ್ಲಿಯಾಗಲಿ ಅಭಿವೃದ್ಧಿ ಪರ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲಾ ಸಮುದಾಯಗಳ ಪ್ರಗತಿಗೆ ಶ್ರಮಿಸಿದೆ. ಪಕ್ಷದ ಅವಧಿಯಲ್ಲಿ ಈ ದೇಶವನ್ನು ಆಳಿದ ಆಯಾ ಪ್ರಧಾನಿಗಳು ದೇಶದ ದನಿಯಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ಅವಧಿಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾಂ ಗಳನ್ನು ಕಟ್ಟುವ ಕೆಲಸವಾಗಿದ್ದು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಪ್ರಿಯಂಕಾ ಜಾರಕಿಹೊಳಿ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಿ:

ಅಥಣಿ: ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಚುನಾವಣೆಯ ತಂತ್ರ ಪ್ರತಿತಂತ್ರಗಳನ್ನ ರೂಪಿಸಬೇಕು. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸಗಳನ್ನ ಜನರಿಗೆ ತಲುಪಿಸಬೇಕು. ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನ ಜಾರಿಗೆ ತಂದಿದ್ದಾರೆ. ಪಂಚ ಗ್ಯಾರಂಟಿಗಳಿಗೆ 55 ಸಾವಿರ ಕೋಟಿ ರೂ. ಹಣ ಮೀಸಲಿಡಲಾಗಿದೆ ಎಂದರು.

ಎರಡು ದಿನಗಳ ಹಿಂದೆ ಸಚಿವ ಸತೀಶ್‌ ಅಣ್ಣಾ ಜಾರಕಿಹೊಳಿ ಅವರು ಪೂರ್ವಭಾವಿ ಸಭೆ ಮಾಡೋಣ. ಶಿವಯೋಗಿ ನಾಡು ಅಥಣಿಯಿಂದ ಪ್ರಚಾರ ಆರಂಭಿಸೋಣ ಎಂದು ಹೇಳಿದ್ದರು. ಯಾವುದೇ ಪಕ್ಷ ಮೊದಲ ಸಭೆ ಅಥಣಿಯಿಂದ ಆರಂಭಿಸಿದರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗುತ್ತೆ ಎನ್ನುವುದು ನಂಬಿಕೆ. ಅದಕ್ಕಾಗಿಯೇ ಈಶಾನ್ಯ ದಿಕ್ಕಿನಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದರು.

ಅಥಣಿ ಪೂರ್ವಭಾಗದ ಜನರು ಬರಗಾಲದಿಂದ ಬಳಲುತ್ತಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ನೀರಾವರಿ ಯೋಜನೆಗೆ ಚಾಲನೆ ನೀಡಿ, ನೀರಿನ ಬರ ನೀಗಿಸಿದ್ದಾರೆ. ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನ ನೀಡಿದೆ. ಹಲವಾರು ಯೋಜನೆಗಳಿಗೆ ಕೋಟ್ಯಂತರ ಅನುದಾನ ನೀಡಿದ್ದಾರೆ ಎಂದರು.

ವಿಷ ಕುಡಿಯಲೂ ಹಣವಿಲ್ಲ ಎಂದಿದ್ದರು ಬಿಎಸ್‌ ವೈ:

ಬಿಎಸ್​​ ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುದಾನ ಕೇಳಿದ್ದೆ. ನನಗೆ ವಿಷ ಕುಡಿಯಲೂ ಹಣವಿಲ್ಲ, ನಿನಗೆ ಎಲ್ಲಿಂದ ಅನುದಾನ ಕೊಡಲಿ ಎಂದಿದ್ದರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಬಿಎಸ್​ ಯಡಿಯೂರಪ್ಪ ಮತ್ತು ಈಶ್ವರಪ್ಪ ರಾಜ್ಯದಲ್ಲಿ ಬಿಜೆಪಿ ಬಲಪಡಿಸಿದರು. ಆದರೆ, K.S.ಈಶ್ವರಪ್ಪ ಮಗನಿಗೆ ಟಿಕೆಟ್ ನೀಡಲಿಲ್ಲ. ಜಗದೀಶ್​​ ಶೆಟ್ಟರ್‌ಗೆ ಮೊದಲು ಬಾಲ ಕಟ್ ಮಾಡಿದರು. ಈಗೀಗ ಜಗದೀಶ್​ ಶೆಟ್ಟರ್​ ಬಾಲ ಮತ್ತೆ ಚಿಗುರುತ್ತಿದೆ ಎಂದು ಬಿಜೆಪಿ ವಿರುದ್ಧ ಇದೇ ವೇಳೆ ಕಿಡಿಕಾರಿದರು.

ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭೆ ಟಿಕೆಟ್‌ ನೀಡಿದ ವೃರಿಷ್ಠರಿಗೆ ಧನ್ಯವಾದ ತಿಳಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿದ್ದು, ಸತೀಶ್‌ ಜಾರಕಿಹೊಳಿ ಫೌಂಡೇಶನ್ ಮೂಲಕ ಸಾವಿರಾರೂ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ‌ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಮಾಡಿದ್ದೇನೆ. ಪ್ರತಿಭಾವಂತ ಯುವಕರಿಗೆ ಪ್ರೋತ್ಸಾಹ‌ ನೀಡುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದೇನೆ. ತಂದೆ, ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಶಾಸಕರು, ಹಿರಿಯರಾದ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಚಿಕ್ಕೋಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನು ಪ್ರಾರಂಭಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಣ ಸವದಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕಾಂಗ್ರೆಸ್‌ ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ, ಚಿದಾನಂದ ಸವದಿ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ರಮೇಶ್‌ ಸಿಂದಗಿ, ಶ್ಯಾಮ್‌ ಪೂಜಾರಿ ಸೇರಿದಂತೆ ಸಾವಿರಾರೂ ಕಾರ್ಯಕರ್ತರು ಇದ್ದರು.

ಶಾಸಕ ಲಕ್ಷ್ಮಣ ಸವದಿ, ಪ್ರಭು ಚನ್ನಬಸವ ಸ್ವಾಮೀಜಿ ಆಶೀರ್ವಾದ ಪಡೆದ ಪ್ರಿಯಂಕಾ ಜಾರಕಿಹೊಳಿ

ಅಥಣಿ: ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಅಥಣಿ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯ ಮುನ್ನ ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಅಥಣಿ ಮೋಟಗಿ ಮಠಕ್ಕೂ ಭೇಟಿ:

ಅಥಣಿ ಮೋಟಗಿ ಮಠಕ್ಕೂ ಭೇಟಿ ನೀಡಿದ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದು, ಸನ್ಮಾನವನ್ನು ಸ್ವೀಕರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button