Belagavi NewsBelgaum NewsKannada NewsKarnataka NewsLatestPolitics

*ಮಾದರಿ ನೀತಿ ಸಂಹಿತೆ ಜಾರಿ; ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ನೀತಿಶ ಪಾಟೀಲ*

ಲೋಕಸಭಾ ಚುನಾವಣೆ

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಸಾರ್ವತ್ರಿಕ ಚುನಾವಣೆಗಳಿಗೆ ಭಾರತ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು ಜಿಲ್ಲೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ಜರುಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ನೀತಿಶ ಪಾಟೀಲ ತಿಳಿಸಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ (ಮಾ.೧೬) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಗಳಿಗೆ ಅಧಿಸೂಚನೆ ಹೊರಡಿಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮಾರ್ಚ್ ೧೬ ರಿಂದ ಮಾದರಿ ನೀತಿ ಸಂಹಿತ ಜಾರಿಗೆ ಬಂದಿರುತ್ತದೆ.


ಚುನಾವಣಾ ಅಧಿಸೂಚನೆಯನ್ನು ಏಪ್ರೀಲ್ ೧೨ ರಂದು ಹೊರಡಿಸಲಾಗುತ್ತಿದ್ದು, ಏಪ್ರೀಲ ೧೯ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಏಪ್ರೀಲ ೨೦ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರೀಲ್ ೨೨ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಮೇ. ೭ ರಂದು ಮತದಾನ ಹಾಗೂ ಜೂನ್ ೪ ರಂದು ಮತ ಏಣಿಕೆ ಜರುಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ೪೦೬೨೨೧೦ ಮತದಾರರಿದ್ದು ಚಿಕ್ಕೋಡಿ ಲೋಕಸಭ ಮತಕ್ಷೇತ್ರದಲ್ಲಿ ೮೬೫೭೩೧ ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೭೪೧೭೫೮ ಮತದಾರರು, ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ೯೫೫೭೨೫ ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೯೦೪೦೯೯ ಮತದಾರರಿದ್ದು ಖಾನಾಪುರ ಹಾಗೂ ಕಿತ್ತೂರ ಮತಕ್ಷೇತ್ರದಲ್ಲಿ ೨೦೪೮೪೮ ಮಹಿಳಾ ಮತದಾರರು ಸೇರಿದಂತೆ ಒಟ್ಟು ೪೧೬೩೫೩ ಮತದಾರರಿರುತ್ತಾರೆ.


ಜಿಲ್ಲೆಯಲ್ಲಿ ಒಟ್ಟು ೪೫೨೪ ಮತಗಟ್ಟೆಗಳನ್ನು ತೆರೆಯಲಾಗಿದ್ದು ಚಿಕ್ಕೋಡಿ ಮತಕ್ಷೇತ್ರದಲ್ಲಿ ನಗರಪ್ರದೇಶದಲ್ಲಿ ೪೧೯, ಗ್ರಾಮೀಣ ಪ್ರದೇಶಗಳಲ್ಲಿ ೧೪೭೭ ಮತಗಟ್ಟೆಗಳು ಸೇರಿದಂತೆ ಒಟ್ಟು ೧೮೯೬ ಮತಗಟ್ಟೆಗಳು, ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ೮೧೪, ನಗರ ಪ್ರದೇಶಗಳಲ್ಲಿ ೧೨೭೨ ಮತಗಟ್ಟೆಗಳು ಸೇರಿದಂತೆ ಒಟ್ಟು ೨೦೮೬ ಮತಗಟ್ಟೆಗಳು, ಖಾನಾಪುರ ಹಾಗೂ ಕಿತ್ತೂರ ಮತಕ್ಷೇತ್ರಗಳಲ್ಲಿ ಒಟ್ಟು ೫೪೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ.


ಒಟ್ಟಾರೆ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಶಾಂತ ರೀತಿಯಿಂದ ಮುಕ್ತವಾಗಿ, ನ್ಯಾಯ ಸಮ್ಮತವಾಗಿ ಹಾಗೂ ನಿಷ್ಪಕ್ಷವಾಗಿ ಜರುಗಿಸಲು ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕ್ರಿಯಾಯತ್ಮಕವಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನಿರ್ದೇಶಿಸಲಾಗಿದ್ದು ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಓ. ರಾಹುಲ ಶಿಂಧೆ, ಆಯ್.ಜಿ.ಪಿ. ವಿಕಾಶ ಕುಮಾರ ವಿಕಾಶ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಡಿ.ಸಿ.ಪಿ. ರೋಹನ ಜಗದೀಶ, ಪ್ರೊಬೆಷನರಿ ಆಯ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button