Belagavi NewsBelgaum NewsKannada NewsKarnataka NewsLatestPolitics

*ಸಂಸತ್ ಘಟನೆ; ಬೆಳಗಾವಿ ಅಧಿವೇಶನದಲ್ಲಿ ಕೋಲಾಹಲ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಂಸತ್ ನಲ್ಲಿ ನಡೆದ ಭದ್ರತಾ ಲೋಪ ಹಾಗೂ ದುಷ್ಕರ್ಮಿಗಳಿಬ್ಬರೂ ಲೋಕಸಭೆಗೆ ನುಗ್ಗಿ ಕಲರ್ ಸ್ಪ್ರೇ ಹರಡಿದ ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ- ಕೋಲಾಹಲ ನಡೆದು ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್, ವಿಷಯ ಪ್ರಸ್ತಾಪಿಸಿ ಸಂಸತ್ ಘಟನೆಯನ್ನು ಖಂಡಿಸಿದರು. ನಂತರ ವಿಪಕ್ಷ ನಾಯಕ ಆರ್.ಅಶೋಕ್, ಸಹ ಮಾತನಾಡಿ ನಾವು ನಮ್ಮ ಆಪ್ತ ಸಹಾಯಕರ ಮೂಲಕ ಪಾಸ್ ಗಳನ್ನು ವಿತರಣೆ ಮಾಡುತ್ತೇವೆ. ಅವರು ಯಾರ್ಯಾರಿಗೆ ಕೊಡುತ್ತಾರೆ ಎಂಬುದು ಕೆಲವೊಮ್ಮೆ ನಮಗೆ ಗೊತ್ತಾಗುವುದಿಲ್ಲ. ಈ ಘಟನೆ ಎಚ್ಚರದಿಂದ ಇರುವಂತೆ ಮಾಡಿದೆ ಎಂದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ ಈಗಾಗಲೇ ಸುವರ್ಣಸೌಧಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದ ಇರೋಣ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪಾಸ್ ಗಳನ್ನು ಕೊಡುವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮೇಲ್ನೋಟಕ್ಕೆ ಸಂಸತ್ ನಲ್ಲಿ ಭದ್ರತಾ ಲೋಪ ಕಾಣಿಸುತ್ತಿದೆ. ಸರಿಯಾಗಿ ತಪಾಸಣೆ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ವಿಧಾನಸೌಧದಲ್ಲಿ ಕೂಡ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಗೃಹಸಚಿವರು ಹಾಗೂ ಸಭಾಧ್ಯಕ್ಷರಿಗೆ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಈ ವೇಳೆ ಸದನಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಅವರ ಪಾಸ್ ತೆಗೆದುಕೊಂಡು ದುಷ್ಕರ್ಮಿ ಒಳಗೆ ಪ್ರವೇಶಿಸಿದ್ದ ಎಂಬ ಮಾಹಿತಿ ಇದೆ. ಈ ಬಗ್ಗೆ ಆರ್.ಅಶೋಕ್ ಅವರೇ ಜವಾಬ್ದಾರಿ ತೆಗೆದುಕೊಳ್ಳಬೇಕು, ಪ್ರತಾಪ್ ಸಿಂಹ ಅವರಿಗೆ ಹೇಗೆ ಹೇಳುತ್ತೀರೋ ನೋಡಿ ಎಂದರು. ಇದು ಅಶೋಕ್ ಅವರನ್ನು ಕೆರಳಿಸಿತು.

ನಿಮ್ಮ ಸಹೋದರರು ಸಂಸದರಿದ್ದಾರೆ. ಅವರು ಪಾಸ್ ಕೊಟ್ಟಿದ್ದರೆ ಏನು ಮಾಡುತ್ತಿದ್ದೀರಿ? ಎಂದು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ನ ನಯನಾ ಮೋಟಮ್ಮ ಎದ್ದು ನಿಂತು, ಪಾಸ್ ಕೊಟ್ಟವರು ಬಿಜೆಪಿ ಸಂಸದರಾಗದೇ ಬೇರೆಯವರು ಆಗಿದ್ದರೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಶೋಕ್ ನಾವೆಲ್ಲರೂ ಭಾರತೀಯರು, ಈ ವಿಷಯದಲ್ಲಿ ಕಾಂಗ್ರೆಸ್ ನವರು ರಾಜಕೀಯ ಮಾಡುತ್ತಿದ್ದಾರೆ ಎಂದರು. ಆಗ ಕಾಂಗ್ರೆಸ್ ನ ಶಾಸಕರೆಲ್ಲ ಎದ್ದುನಿಂತು ಜೋರಾಗಿ ಗದ್ದಲ ಆರಂಭಿಸಿದರು.

ಕಾಂಗ್ರೆಸ್ ಸಂಸದರು ಪಾಸ್ ನೀಡಿದ್ದರೆ ಬಿಜೆಪಿಯವರು ಕಾಂಗ್ರೆಸ್ ನವರಿಗೆ ಉಗ್ರರ ಪಟ್ಟ ಕಟ್ಟುತ್ತಿದ್ದರು ಎಂದು ಜೋರಾಗಿ ಕೂಗಿದರು. ಕೇವಲ 2-3 ಶಾಸಕರು ಮಾತ್ರ ಅಶೋಕ್ ಅವರ ಪರ ನಿಂತರೆ ಕಾಂಗ್ರೆಸ್ ನ ಬಹುತೇಕ ಶಾಸಕರು ಎದ್ದುನಿಂತು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡರು.

ಸಚಿವ ಪ್ರಿಯಾಂಕ್ ಖರ್ಗೆ ಎದ್ದುನಿಂತು ಕಾಂಗ್ರೆಸ್ ಸಂಸದರು ಪಾಸ್ ಕೊಟ್ಟಿದ್ದರೆ ನಮಗೆಲ್ಲ ದೇಶದ್ರೋಹಿ ಪಟ್ಟಕಟ್ಟಿ ಕೋಲಾಹಲ ಮಾಡುತ್ತಿದ್ದಿರಿ. ನಿಮ್ಮ ಸಂಸ್ಕೃತಿ ಅಂತಾದ್ದು ಎಂದು ಛೇಡಿಸಿದರು. ಈ ವೇಳೆ ಅಶೋಕ್ ಎದ್ದು ನಿಂತು ಡಿ.ಕೆ.ಶಿವಕುಮಾರ್ ಕಡೆ ಕೈತೋರಿಸಿ ಈತರದ ವ್ಯಕ್ತಿಗಳಿಂದಲೇ ಹಾಳಾಗೋದು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಅವರು ನಮ್ಮ ಸಹೋದರರು ಎಂದಿದ್ದೀರಿ ಎಂದು ಕಿಡಿಕಾರಿದರು. ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ಅಶೋಕ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಾವೇನು ನಿಮ್ಮ ರಾಜೀನಾಮೆ ಕೇಳಿದ್ದೀವಾ? ಇರುವ ವಿಷಯವನ್ನು ಹೇಳಿದರೆ ಏನು ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಈ ವೇಳೆ ಅರಗ ಜ್ಞಾನೇಂದ್ರ ಮತ್ತು ಸುರೇಶ್ ಕುಮಾರ್ ಅಶೋಕ್ ಅವರ ಬೆಂಬಲಕ್ಕೆ ಬಂದರು. ಉಪಮುಖ್ಯಮಂತ್ರಿಗಳು ಈ ವಿಷಯವನ್ನು ಮಾತನಾಡುವ ಅವಶ್ಯಕತೆಯೇ ಇರಲಿಲ್ಲ ಎಂದರೆ ಡಿ.ಕೆ.ಶಿವಕುಮಾರ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸದನದಲ್ಲಿ ಭಾರೀ ಕೋಲಾಹಲ ಉಂಟಾಯಿತು. ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಸಭಾಧ್ಯಕ್ಷರ ಕೊಠಡಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಪಕ್ಷ ನಾಯಕರನ್ನು ಕರೆಸಿ ಸಂಧಾನ ನಡೆಸಲಾಯಿತು. ಅರ್ಧ ಗಂಟೆ ನಂತರ ಪುನಃ ಸದನ ಸೇರಿದಾಗ ಮತ್ತೆ ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಎಲ್ಲರನ್ನೂ ಕೂಡ್ರಿಸಿ ಸಂಸತ್ ನಲ್ಲಿ ನಡೆದ ಘಟನೆ ಗಂಭೀರವಾಗಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ರಾಜ್ಯದ ಜನತೆಯ ಪರವಾಗಿ ಘಟನೆಯನ್ನು ಖಂಡಿಸೋಣ. ಸೂಕ್ತ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಆಗ್ರಹಿಸೋಣ. ಪರಿಚಯ ಇಲ್ಲದವರಿಗೆ ಪಾಸ್ ಕೊಡುವುದನ್ನು ನಿಲ್ಲಿಸೋಣ. ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳೋಣ. ಶಾಸಕರ ಪಿಎಗಳು ಅಥವಾ ಆಪ್ತ ಸಹಾಯಕರು ಶಾಸಕರಿಗಿಂತ ತಮ್ಮದೇ ಪವರ್ ಜಾಸ್ತಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಡ್ರೈವರ್ ಗಳು ನಮ್ಮನ್ನು ಒಳಗೆ ಬಿಟ್ಟ ನಂತರ ಮತ್ತೆ ಹೋಗಿ ಹತ್ತು ಮಂದಿಯನ್ನು ಕರೆದುಕೊಂಡುಬರುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ನಾನು ಪೊಲೀಸ್, ಗುಪ್ತದಳ ಅಧಿಕಾರಿಗಳು ಎಲ್ಲರನ್ನು ಕರೆದು ಈಗಾಗಲೇ ಚರ್ಚಿಸಿದ್ದೇನೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಡದೇ ಸೂಕ್ತ ಬಂದೋಬಸ್ತ್ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಶಾಸಕರಾದವರು ಕೂಡ ಪೌರುಷ ತೋರಿಸದೇ ಪ್ರಭುದ್ಧತೆ ತೋರಿಸೋಣ ಎಂದರು. ವಿಷಯ ಚರ್ಚೆ ವೇಳೆ ಬಳಕೆಯಾದ ಅಸಂಸದೀಯ ಪದಗಳನ್ನು ಕಡತದಿಂದ ತೆಗೆದುಹಾಕುವುದಾಗಿ ಖಾದರ್ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button