ಪ್ರಗತಿವಾಹಿನಿ ಸುದ್ದಿ: ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
10 ಸರ್ಕಾರಿ ಅಧಿಕಾರಿಗಳ ಮನೆ ಕಚೇರಿಗಳ ಮೇಲೆ ಒಟ್ಟು 40 ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಸಂಬಂಧಿಕರ ಮನೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಮರಾಜನಗರ, ವಿಜಯನಗರ, ಕೊಪ್ಪಳ್ಳ, ಬಳ್ಳಾರಿ, ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ದಾಳಿ ನಡೆಸಲಾಗಿದೆ.
ಮಂಡ್ಯದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹರ್ಷ ಅವರ ಕಚೇರಿ ಮನೆ, ಫಾರ್ಮ್ ಹೌಸ್, ಹಾಸನದ ಆಹಾರ ನಿರೀಕ್ಷಕ ಜಗನ್ನಾಥ ಅವರ ಮನೆ, ಕಚೇರಿ, ಜಗನ್ನಾಥ ಅವರ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ, ಕಚೇರಿಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಚಿಕ್ಕಮಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೇತ್ರಾವತಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿ ನೇತ್ರಾವತಿ 13 ವರ್ಷಗಳಿಂದ ಅಧಿಕ ಆಸ್ತಿ ಹೊಂದಿರುವ ಆರೋಪ ಕೇಳಿಬಂದಿದೆ.
ಮೂಡಾ ಇಂಜಿನಿಯರ್ ಯಜ್ಞೇಂದ್ರ ಅವರ ಮನೆ ಹಾಗೂ ಕಚೇರಿ, ಅಪಾರ್ಟ್ ಮೆಂಟ್ ಗಳ ಮೇಲೆ ಹಾಗೂ ಅವರ ಸಹೋದರನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಕೆ ಆರ್ ಡಿ ಎಲ್ ಇಂಜಿನಿಯರ್ ಹನುಮಂತರಾಯಪ್ಪ ಅವರ ತುಮಕೂರು ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಒಟ್ಟಾರೆ 40 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ