Kannada NewsKarnataka NewsNationalPolitics

*ಇಲಾಖೆ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವರ ಸುದೀರ್ಘ ಸಭೆ*

ಪ್ರಗತಿವಾಹಿನಿ ಸುದ್ದಿ: ಸೆಪ್ಟೆಂಬರ್ ಮೊದಲ ವಾರದೊಳಗೆ ಕೌನ್ಸಿಲಿಂಗ್ ವರ್ಗಾವಣೆ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಇಂದು ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು,  8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವರ್ಗದ ನೌಕರರು, ಸಿಬ್ಬಂದಿಗಳ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ನಡೆಯುತ್ತಿದ್ದು, ಶೀಘ್ರಗತಿಯಲ್ಲಿ ಪ್ರಕ್ರೀಯೆ ಪೂರ್ಣಗೊಳಿಸಬೇಕು ಎಂದರು. 

ಸೆಪ್ಟೆಂಬರ್ ಮೊದಲ‌ವಾರದಲ್ಲಿ ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಾಗಬೇಕು.. ಹಲವು ವೈದ್ಯರು ಕೌನ್ಸಿಲಿಂಗ್ ಎದುರು ನೋಡುತ್ತಿದ್ದಾರೆ. ಕೌನ್ಸಿಲಿಂಗ್ ಪ್ರಕ್ರೀಯೆಯಲ್ಲಿ ವಿಳಂಭವಾಗಬಾರದು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಇನ್ನು ಇಲಾಖೆಯಲ್ಲಿ ಕಾರ್ಯನಿರಗವಹಿಸುವ ಹೊರಗುತ್ತಿಗೆ ನೌಕರರಿಗೆ ಏಕರೂಪ ವೇತನ ಜಾರಿ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಔಷಧಿಗಳ ಪೂರೈಕೆ ಇನ್ನಷ್ಟು ವೇಗ ಪಡೆದುಕೊಳ್ಳಬೇಕು

ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಂಡುಬಂದರೆ ಸಹಿಸುವುದಿಲ್ಲ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ಸರಬರಾಜು ನಿಗಮದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಔಷಧಿ ನಿಗಮದಿಂದ ಸರಬರಾಜು ಆಗುತ್ತಿರುವ ಔಷಧಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಮೊದಲಿಗಿಂತ ಔಷಧಿ ಪೂರೈಕೆಯಲ್ಲಿ ಸುಧಾರಣೆ ಆಗಿದೆ.. ಈ ಮೊದಲು ಕೇವಲ ಶೇ 30 ರಷ್ಟು ಮಾತ್ರ ಔಷಧಿಗಳು ನಿಗದಿಂದ ಸರಬರಾಜು ಆಗುತ್ತಿತ್ತು. ಇದೀಗ ಶೇ 65 ರಷ್ಟು ಔಷಧಿಗಳು ನಿಗದಿಂದ ಆಸ್ಪತ್ರೆಗಳಿಗೆ ರವಾನೆಯಾಗಿದೆ. ಆದರೆ ಇದು ಶೇ 90 ರಷ್ಟು ಆಗಬೇಕು ಎಂದರು. 

ಶೇ 10 ರಷ್ಟು ಔಷಧಿಗಳನ್ನ ಆಸ್ಪತ್ರೆಗಳು ಅವರ ಅಗತ್ಯಕ್ಕನುಗುಣವಗಿ ಸ್ಥಳೀಯ ಮಟ್ಟದಲ್ಲಿ ಎಬಿಎಆರ್ ಕೆ ಫಂಡ್ ನಲ್ಲಿ ಖರೀಧಿಸಬಹುದು. ಆದರೆ ಎ.ಬಿ.ಎ.ಆರ್ ಕೆ ಹಣ ಬಹುತೇಕ ಔಷಧಿ ಖರೀಧಿಗೆ ಬಳಕೆ ಆಗಬಾರದು. ಇದರಿಂದ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತದೆ. ನಿಗಮದಿಂದ ಶೇ 90 ರಷ್ಟು ಔಷಧಿಗಳು ಪೂರೈಕೆ ಆದರೆ, ಎಬಿ.ಎಆರ್.ಕೆ ಅನುದಾನವನ್ನ ಆಸ್ಪತ್ರೆಗಳ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು. ಹೀಗಾಗಿ ಔಷಧಿಗಳ ಪೂರೈಕೆಗೆ ಇನ್ನು ಹೆಚ್ವಿನ ವೇಗ ನೀಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. 

ಇನ್ನು ಆರೋಗ್ಯ ಸೇವೆಗಳ ಕುರಿತು ಸಾರ್ವಜನಿಕರ ದೂರು ದುಮ್ಮಾನಗಳಿಗೆ 104 ಸಹಾಯವಾಣಿಗೆ ಪರ್ಯಾಯವಾಗಿ 112 ಸಹಾಯವಾಣಿ ಆರಂಭಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಸಚಿವರು ಇದೇ ವೇಳೆ ಸೂಚನೆ ನೀಡಿದರು. 104 ಸಹಾಯವಾಣಿ ಆರೋಗ್ಯ ಇಲಾಖೆಗೆ ಮಹತ್ವದ್ದಾಗಿದೆ. ಇದನ್ನ ಜಾರಿಗೊಳಿಸಲು ಅಡೆತಡೆಗಳಿದ್ದರೆ 112 ಮೂಲಕ ಸೇವೆ ಒದಗಿಸಲು ಯೋಜನೆ ರೂಪಿಸುವಂತೆ ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button