
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ದಿಯುಂತಾಗಿದ್ದು, ರಸ್ತೆ ಮಾರ್ಗವೂ ಕಣ್ಣಿಗೆ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕಾಣಿಯೂರಿನಲ್ಲಿ ದುರಂತವೊಂದು ಸಂಭವಿಸಿದೆ.
ಭಾರಿ ಮಳೆಯಲ್ಲಿ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಹೊಳೆಗೆ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರು ಸಮೀಪದ ಬೈತಡ್ಕ ಬಳಿ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಕಾರು ಏಕಾಏಕಿ ಗೌರಿಹೊಳೆಗೆ ಕಟ್ಟಿದ ಸೇತುವೆಗೆ ಡಿಕ್ಕಿಹೊಡೆದಿದ್ದು, ಬಳಿಕ ಹೊಳೆಗೆ ಹಾರಿ ಬಿದ್ದಿದೆ. ನೀರಿನ ರಭಸಕ್ಕೆ ವ್ಯಕ್ತಿಗಳ ಸಮೇತ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತದ ರಭಸಕ್ಕೆ ಸೇತುವೆ ಬಳಿಯ ಮೂರು ಕಂಬಗಳು ಮುರಿದು ಬಿದ್ದಿದ್ದು, ಕಾರು ಸೇತುವೆಯಿಂದ ಹೊಳೆಗೆ ಬಿದ್ದಿದೆ. ಭಾರಿ ಮಳೆಯಿಂದಾಗಿ ಹೊಳೆ ತುಂಬಿ ಹರಿಯುತ್ತಿದ್ದು, ಕಾರು ಹಾಗೂ ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತಕ್ಕೀಡಾದ ಕಾರು ಕಡಬ ತಾಲೂಕಿನ ಗುತ್ತಿಗಾರುವಿನ ಮನೆಯವರದ್ದಾಗಿದೆ. ಮಾರುತಿ-800 ಕಾರು ಇದಾಗಿದ್ದು, ಕಾರಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೊಳೆಯಲ್ಲಿ ಬೋಟ್ ಸಹಾಯದಿಂದ ಕಾರಿನಲ್ಲಿದ್ದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ
ಗುಡ್ಡಕುಸಿತ; ಹೊರನಾಡು-ಶೃಂಗೇರಿ ಮಾರ್ಗ ಸ್ಥಗಿತ; ಆಗುಂಬೆ ಘಾಟ್ ನಲ್ಲಿಯೂ ಭೂಕುಸಿತ