ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತ. ಉಪಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಸಚಿವರನ್ನಾಗಿ ಮಾಡುವುದೂ ನಿಶ್ಚಿತ. ಆದರೆ ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ಕೊಡುವ ಸಾಧ್ಯತೆ ಸದ್ಯಕ್ಕೆ ಇಲ್ಲ ಎಂದು ಮಾಜಿ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲಿ ಚರ್ಚಿಸಲು ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಸಾಧ್ಯತೆ ಕಡಿಮೆ. ಈಗಾಗಲೇ ಅವರು ಅಮಿತ್ ಶಾ ಜೊತೆ ಚರ್ಚೆ ಮಾಡಿದ್ಧಾರೆ. ಆದರೆ, ಸೋತವರಿಗೆ ಮಂತ್ರಿ ಸ್ಥಾನ ಸದ್ಯಕ್ಕಂತೂ ಇಲ್ಲ. ಅಂತಹ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು.
ಇನ್ನು ಅಗತ್ಯಬಿದ್ದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂಬ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಧುಸ್ವಾಮಿಯದ್ದು ವೈಯಕ್ತಿಕ ಹೇಳಿಕೆ. ಸಚಿವರು ಸ್ಥಾನ ತ್ಯಾಗ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಅಂಥ ಯಾವುದೇ ಚರ್ಚೆಗಳೂ ಸರ್ಕಾದ ಮಟ್ಟದಲ್ಲಿ ನಡೆದಿಲ್ಲ ಎಂದು ತಿಳಿಸಿದರು.
ಪಕ್ಷ ತೊರೆದು ಬಿಜೆಪಿಸೇರ್ಪಡೆಯಾದವರು ಈಗ ಅತಂತ್ರರಾಗಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ಸಿದ್ದರಾಮಯ್ಯ ಅವರೇ ಅತಂತ್ರವಾಗಿದ್ಧಾರೆ. ಈಗ ಮತ್ತೆ ಲಾಯರ್ಗಿರಿ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯಗೆ ಕಾಂಗ್ರೆಸ್ನಿಂದ ಸದ್ಯದಲ್ಲೇ ಗೇಟ್ಪಾಸ್ ಸಿಗುತ್ತದೆ. ಹಾಗಾಗಿ ಅವರು ವಕೀಲಿಕೆಗೆ ಮುಂದಾಗಿದ್ಧಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ