
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಯುವಕ ತನ್ನ ಪ್ರಿಯತಮೆಯನ್ನೇ ಕುಕ್ಕರ್ ನಿಂದ ಹೊಡೆದು ಹತ್ಯೆಗೈದಿರುವ ಘೋರ ಘಟನೆ ರಾಜಧಾನಿ ಬೆಂಗಳೂರಿನ ನ್ಯೂ ಮೈಕೋಲೇಔಟ್ ನಲ್ಲಿ ನಡೆದಿದೆ.
24 ವರ್ಷದ ದೇವಿ ಮೃತ ಯುವತಿ. ವೈಷ್ಣವ್ ತನ್ನ ಪ್ರಿಯತಮೆಯನ್ನೇ ಕೊಂದ ಯುವಕ. ಕೇರಳ ಮೂಲದವರಾದ ವೈಷ್ಣವ್ ಹಾಗೂ ದೇವಿ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಈ ಜೋಡಿ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಇತ್ತೀಚೆಗೆ ಇಬ್ಬರೂ ವಿವಾಹವಾಗುವ ನಿರ್ಧಾರ ಮಾಡಿ ಎರಡೂ ಕುಟುಂಬದವರನ್ನು ಒಪ್ಪಿಸಿದ್ದರು.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜೋಡಿ ಆಗಾಗ ಜಗಳವಾಡುತ್ತಿದ್ದರು. ಆದರೆ ಎರಡೂ ಕುಟುಂಬದವರು ಇಬ್ಬರ ನಡುವೆ ರಾಜಿ ಮಾಡಿಸಿ ಮದುವೆ ಸಿದ್ಧತೆ ಮಾಡಿಕೊಂಡಿದ್ದೇವೆ, ಸಣ್ಣಪುಟ್ಟ ವಿಷಯಕ್ಕೆ ಜಗಳಮಾಡುವುದು ಸರಿಯಲ್ಲ ಎಂದು ಬೈದು ಬುದ್ಧಿಹೇಳಿ ಹೋಗಿದ್ದರಂತೆ. ಮದುವೆ ಮಾತುಕತೆ ನಂತರ ಬರಬರುತ್ತಾ ವೈಷ್ಣವ್ ಗೆ ತನ್ನ ಪ್ರಿಯತಮೆ ಮೇಲೆ ಅನುಮಾನ ಶುರುವಾಗಿದೆ. ಇದೇ ಅನುಮಾನಕ್ಕೆ ವೈಷ್ಣವ್ ದೇವಿಯ ತಲೆ ಹಿಂಭಾಗಕ್ಕೆ ಕುಕ್ಕರ್ ನಿಂದ ಹೊಡೆದಿದ್ದಾನೆ.
ಬಲವಾಗಿ ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ದೇವಿ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಕೆಲ ಸಮಯದ ಬಳಿಕ ಯುವಕ ವೈಷ್ಣವ್ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ