Belagavi NewsBelgaum NewsKannada NewsKarnataka NewsPolitics

*ಎಲ್ ಆ್ಯಂಡ್ ಟಿ ವಿರುದ್ಧ ಶಾಸಕ ಅಭಯ ಪಾಟೀಲ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನರಿಗೆ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ನಗರದ ಕುಡಿಯುವ ನೀರು ಪೂರೈಕೆ ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಕೊಟ್ಟಿದ್ದೇವೆ. ಆದರೆ ಈಗ ಅನುಕೂಲದ ಬದಲು ಅನಾನುಕೂಲವೇ ಹೆಚ್ಚಾಗಿದೆ ಎಂದು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಎಲ್ ಆ್ಯಂಡ್ ಟಿ ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ ಆ್ಯಂಡ್ ಟಿ ಕಂಪನಿಗೆ 2019 ರಲ್ಲಿ 588 ರೂ. ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಜವಾಬ್ದಾರಿಯನ್ನು ನೀಡಿದ್ದೇವೆ. 6 ತಿಂಗಳು ಸರ್ವೇ ಮಾಡಲು ಸಮಯ ನೀಡಿದ್ದೇವೆ. ಆದ್ರೂ ಅವರು ಕಾಮಗಾರಿ ಆರಂಭಿಸಿಲ್ಲ. ಅವರು ಕೆಲಸ ಮಾಡಲು ಆರಂಭಿಸಿರುವುದು ವಿಧಾನ ಸಭಾ ಚುನಾವಣೆ ಸಮಯದಲ್ಲಿ ಎಂದು ಆಕ್ರೋಶ ಹೊರ ಹಾಕಿದರು.‌

ಎಲ್ ಆಂಡ್ ಟಿ ಕಂಪನಿ ಹಾಕಿರುವ ಪೈಪ್ ಗಳಲ್ಲಿ ಸೋರಿಕೆ ಇದ್ದರೂ ಅದನ್ನು ದುರಸ್ತಿ ಮಾಡುತ್ತಿಲ್ಲ. ಅಗೆದಿರುವ ರಸ್ತೆಗಳನ್ನು ಮುಚ್ಚುತ್ತಿಲ್ಲ. ತೀವ್ರ ಹದಗೆಟ್ಟಿರುವ ರಸ್ತೆಗಳನ್ನು 15 ದಿನಗಳ ಒಳಗೆ ಎಲ್ ಆಂಡ್ ಟಿ ಕಂಪನಿಯವರು ಸರಿ ಮಾಡಬೇಕು ಎಂದು ಶಾಸಕ ಅಭಯ್ ಪಾಟೀಲ್ ಗಡುವು ನೀಡಿದರು.

ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಅವರು, 187 ಕೋಟಿ ಹಣವನ್ನು ಸರಕಾರ ಲಪಟಾಯಿಸಿದೆ. ಚಂದ್ರಶೇಖರ ಬರೆದಿರುವ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಖವಿದೆ. ಮೊದಲ ಭ್ರಷ್ಟಾಚಾರ ‌ಪ್ರಕರಣ ಬಯಲಾಗಿದೆ. ಜೂನ್ 6 ರ ಒಳಗಾಗಿ ಸಚಿವರು ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಎಸ್ಸಿ, ಎಸ್ಟಿ ಫಂಡ್ ದುರುಪಯೋಗಕ್ಕೆ ಸರ್ಕಾರ ಕೈ ಹಾಕಿದೆ. ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ಸಿಎಂ ಪಡೆಯಬೇಕಿತ್ತು,  ಇಲ್ಲವೇ ವಜಾ ಮಾಡಬೇಕಿತ್ತು. ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನವಾಗಲಿದೆ. ಇದು 20-20 ಮ್ಯಾಚ್ ಅಲ್ಲ 10-10 ಮ್ಯಾಚ್. ದಲಿತ ಪರ ಎಂದು ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಶೇ. 40 ರಷ್ಟು ಕಮಿಷನ್ ಎಂದು ಬಿಜೆಪಿ ಮೇಲೆ ಆರೋಪ ಮಾಡಿದ್ರು. ಆದರೆ ಈ ಸರ್ಕಾರ ಶೇ 100ರಷ್ಟು ಕಮಿಷನ್ ಸರ್ಕಾರ ಆಗಿದೆ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಆರಂಭ ಮಾಡುತ್ತೇವೆ ಎಂದು ತಿಳಿಸಿದರು.‌

ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಹೀಗಾಗಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ. ಯತ್ನಾಳ್, ಬಿವೈವಿ ಇಬ್ಬರು ನಮ್ಮ ನಾಯಕರು. ಯತ್ನಾಳ್ ಅವರು ವಿಜಯೇಂದ್ರ‌ ವಿರುದ್ಧ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದ ಅವರು, ಇಡೀ ದೇಶದಲ್ಲಿ 402ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button