
ಪ್ರಗತಿವಾಹಿನಿ ಸುದ್ದಿ: ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ. ನಬೋಮಂಡಲದಲ್ಲಿ ಖಗೋಳ ಕೌತುಕ ಸಂಭವಿಸಲಿದೆ. ಈ ವರ್ಷದ ಎರಡನೇ ಹಾಗೂ ಕೊನೆ ಚದ್ರಗ್ರಹಣ ಇದಾಗಿದೆ. ಭಾರತಲ್ಲಿ ಸಂಪೂರ್ಣವಾಗಿ ಚಂದ್ರಗ್ರಹಣ ಗೋಚರವಾಗಲಿದೆ.
ರಾತ್ರಿ 9:57ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಸೆಪ್ಟೆಂಬರ್ 8ರ ಬೆಳಗಿನ ಜಾವ 1:26ಕ್ಕೆ ಗ್ರಹಣ ಮುಕ್ತಾಯವಾಗಲಿದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಂದು ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿವೆ.
ಯಾವೆಲ ದೇವಾಲಯಗಳು ಬಂದ್ ಆಗಲಿವೆ ಇಲ್ಲಿದೆ ಮಾಹಿತಿ:
ರಾಜ್ಯ ರಾಜಧಾನಿ ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ಕಾಡುಮಲ್ಲೇಶ್ವರ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ಅಣ್ಣಮ್ಮ ದೇವಸ್ಥಾನ, ಬಂಡೆ ಮಹಾಕಾಳಿ ದೇವಸ್ಥಾನ , ರಾಜರಾಜೇಶ್ವರಿ ದೇವಸ್ಥಾನ, ಇಸ್ಕಾನ್ ದೇವಾಲಗಳು ಬಂದ್ ಆಗಿರಲಿದ್ದು, ನಾಳೆ ಬಾಗಿಲು ತೆರೆಯಲಿವೆ.
ಗ್ರಹಣ ಹಿನ್ನೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕುದ್ರೋಳಿ ದೇವಾಲಯ, ಘಾಟಿ ಸುಬ್ರಹ್ಮಣ್ಯ, ಗೋಕರ್ಣ ಮಹಾಬಲೇಶ್ವರ, ಕೊಪ್ಪಳದ ಹೆಲಗೆಮ್ಮ ದೇವಸ್ಥಾನ, ಬೇಲೂರು ಚನ್ನಕೇಶ್ವ ದೇವಸ್ಥಾನ, ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನಗಳು ಬಂದ್ ಆಗಲಿವೆ.
ಇನ್ನು ತಿರುಪತಿಯ ತಿಮ್ಮಪ್ಪನ ದೇವಸ್ಥಾನ , ಅಯೋಧ್ಯೆ ಶ್ರೀರಾಮ ಮಂದಿರ ಕೂಡ ಬಂದ್ ಆಗಲಿದ್ದು, ನಾಳೆ ಬೆಳಿಗ್ಗೆ ಶುದ್ಧೀಕರಣದ ಬಳಿಕ ಭಕ್ತರಿಗೆ ದೇವಾಲಯ ತೆರೆಯಲಿದೆ.
ಗ್ರಹಣ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಕಾಲ ಹಾಗೂ ಗ್ರಹಣ ಮೋಕ್ಷ ಕಾಲದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಆದರೆ ದೇವಾಲಯಕ್ಕೆ ಭಕ್ತರಿಗೆ ಅವಕಾಶವಿಲ್ಲ. ನಾಳೆ ಬೆಳಿಗ್ಗೆ 8 ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಗುವುದು.