*ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಸೂಕ್ತ ಜಾಗ, ಕಟ್ಟಡ ವ್ಯವಸ್ಥೆಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ*

ಪ್ರಗತಿವಾಹಿನಿ ಸುದ್ದಿ:“ಪದ್ಮಶ್ರೀ ಪುರಸ್ಕೃತ, ಪುಸ್ತಕ ಪ್ರೇಮಿ ಎಂದು ಹೆಸರಾಗಿರುವ ಎಂ ಅಂಕೇಗೌಡ ಅವರ ಸಂಗ್ರಹದಲ್ಲಿರುವ 20 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳಿಗೆ ಸೂಕ್ತ ಜಾಗ ಹುಡುಕಿ, ಸುಸಜ್ಜಿತ ಕಟ್ಟಡ ವ್ಯವಸ್ಥೆ ಮಾಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಾದ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಸೋಮವಾರ ಭೇಟಿ ಮಾಡಿದ ಅಂಕೇಗೌಡ ಅವರು ಪುಸ್ತಕಗಳಿಗೆ ಸೂಕ್ತ ವ್ಯವಸ್ಥೆಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀಯುತರನ್ನು ಸಿಎಂ ಸನ್ಮಾನಿಸಿದರು.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ʼಅಂಕೇಗೌಡ ಜ್ಞಾನ ಪ್ರತಿಷ್ಠಾನ’ದ ಮೂಲಕ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ ಅಂಕೇಗೌಡರು “ದೇಶದ ಅತಿದೊಡ್ಡ ಪರ್ಸನಲ್ ಲೈಬ್ರರಿ ಇದಾಗಿದ್ದು, ನೀವು ಸೂಕ್ತ ಕಟ್ಟಡ ವ್ಯವಸ್ಥೆ ಮಾಡಿದರೆ ಮಕ್ಕಳಿಗೆ ಅರಿವಿನ ತಾಣವಾಗಿ ಮಾರ್ಪಾಡಗಲಿದೆ. ಸಂಗ್ರಹದಲ್ಲಿರುವ ಅಪರೂಪದ ಪುಸ್ತಕಗಳು ಅತ್ಯುತ್ತಮ ದಾಖಲೆಗಳು” ಎಂದು ಹೇಳಿದರು.
ಇದೇ ವೇಳೆ ತಮ್ಮ ಬಳಿ ಇರುವ ಅಪರೂಪದ ನಾಣ್ಯಗಳು, ಅಂಚೆ ಚೀಟಿಗಳನ್ನು ಮುಖ್ಯಮಂತ್ರಿಯವರಿಗೆ ತೋರಿಸಿ ಅದರ ಬಗ್ಗೆ ವಿವರಣೆ ನೀಡಿದರು. ಅಪರೂಪದ ವಸ್ತುಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಕುತೂಹಲದಿಂದ ವೀಕ್ಷಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದರು.




