ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಮುಸ್ಲೀಂಮರು ಬಿಜೆಪಿಗೆ ಮತಹಾಕಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಮುಸ್ಲಿಂ ಸಮುದಾಯದಿಂದ ಒಂದೇ ಒಂದು ಮತ ಬಂದಿಲ್ಲ. ಅವರು ದೇಶಪ್ರೇಮಿಗಳಲ್ಲ. ಹಾಗಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಮುಸ್ಲೀಂ ಸಮುದಾಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್, ಅಭಿವೃದ್ಧಿ ಕಾರ್ಯ ಮಾಡಿ ಕೊಡುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ.
ದಾವಣಗೆರೆಯಲ್ಲಿ ಸಿಎಎ ಪರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ಜೆಪಿಗೆ ವೋಟು ಹಾಕದ ಮುಸ್ಲಿಮರು ದೇಶ ವಿರೋಧಿಗಳಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲೂ ಅವರು ನನಗೆ ವೋಟು ಹಾಕಲಿಲ್ಲ. ಅವರು ಎಂದೂ ಬಿಜೆಪಿ ವೋಟು ಹಾಕಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾನು ಅವರಲ್ಲಿ ಮತ ಯಾಚಿಸುವುದಿಲ್ಲ. ನಾನು ಮುಸಲ್ಮಾನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಅವರ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಿಲ್ಲ ಎಂದರು.
ಅಲ್ಲದೇ ಹೊನ್ನಾಳಿಯಲ್ಲಿ 4 ಚುನಾವಣೆ ಎದುರಿಸಿದ್ದೇನೆ ಆದರೆ ನನಗೆ ಮುಸ್ಲಿಮರು ಮತ ಹಾಕುತ್ತಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಮುಸ್ಲಿಂ ಸಮುದಾಯದಿಂದ ಒಂದೂ ಮತ ಬಂದಿಲ್ಲ. ಅಭಿವೃದ್ಧಿ ಕೆಲಸ ಮಾಡಲು ನಾನು ಬೇಕು, ವೋಟು ಮಾತ್ರ ಕಾಂಗ್ರೆಸಿಗರಿಗೆ ಎಂಬುದು ಯಾವ ನ್ಯಾಯ? ಹೀಗಾಗಿ ಇನ್ನುಮುಂದೆ ನನ್ನ ಮತಕ್ಷೇತ್ರದಲ್ಲಿ ಈ ಸಮುದಾಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಕೊಡುವುದಿಲ್ಲ. ಹೊನ್ನಾಳಿಯನ್ನು ಸಂಪೂರ್ಣ ಕೇಸರೀಕರಣ ಮಾಡುತ್ತೇನೆ ಎಂದೂ ಘೋಷಿಸಿದ್ದಾರೆ.
ಕೆಲವು ಮಸೀದಿಗಳು ಮದ್ದು ಗುಂಡು ಸಂಗ್ರಹ ಹಾಗೂ ಭಯೋತ್ಪಾದಕ ತಾಣಗಳಾಗಿದ್ದು, ಮದರಸಾಗಳಲ್ಲಿ ಮಕ್ಕಳ ಮೈಂಡ್‌ವಾಷ್ ಮಾಡಿ ಭಯೋತ್ಪಾದಕರನ್ನು ಸೃಷ್ಟಿಸಲಾಗುತ್ತಿದೆ ಎಂದೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ದೇಶದ ಮುಸ್ಲಿಮರು ನಿಜಕ್ಕೂ ಭಾರತೀಯರು ಎಂದಾದರೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಒಪ್ಪಬೇಕು. ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಮಸೀದಿಗಳಲ್ಲಿ ಪತ್ವಾ ಹೊರಡಿಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ರಾಜಕೀಯ ಕಾರಣಕ್ಕಾಗಿ ಬೆಂಬಲವಾಗಿ ನಿಂತಿವೆ ಎಂದು ಕಿಡಿಕಾರಿದರು.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ನಿಷೇಧಿಸುವಂತೆ ಕೇಂದ್ರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ, ಸಂಘ ಪರಿವಾರದ ಸಂಘಟನೆಗಳನ್ನೂ ನಿಷೇಧಿಸುವಂತೆ ಮಾಜಿ ಸಚಿವರಾದ ಯು.ಟಿ.ಖಾದರ್ ಮತ್ತು ಜಮೀರ್ ಅಹ್ಮದ್ ಒತ್ತಾಯಿಸುತ್ತಿರುವುದು ದುರದೃಷ್ಟಕರ. ಸಂಘ ಪರಿವಾರದವರು ದೇಶವನ್ನ ಉಳಿಸೋ ಕೆಲಸ ಮಾಡ್ತಿದ್ದಾರೆ. ಆದರೆ ಅವರ ವಿರುದ್ಧವೇ ಆರೋಪ ಮಾಡುತ್ತಿರುವ ಖಾದರ್ ಹಾಗೂ ಜಮೀರ್ ಇಬ್ಬರೂ ನಾಯಕರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ