ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೆಡಿಎಸ್ ನಾಯಕರು ಪಕ್ಷದಲ್ಲಿ ಇರುವವರನ್ನು ಪಕ್ಷ ಬಿಟ್ಟು ಹೋಗದಂತೆ ಉಳಿಸಿಕೊಳ್ಳುವುದು ದೊಡ್ಡ ಸಾಹಸ. ಪಕ್ಷದಲ್ಲಿ ಈಗ ಗೊಂದಲ, ಕಷ್ಟದ ಪರಿಸ್ಥಿತಿ ಇದೆ. ಮತದಾರರನ್ನು ಸೆಳೆಯುವ ಮುನ್ನ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಯಾವುದೇ ಒತ್ತಡ ಕೊಟ್ಟಿಲ್ಲ. ಪಕ್ಷದಲ್ಲಿ ಈಗ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ಮೊದಲ ಆದ್ಯತೆಯಾಗಿದೆ. ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ನಮ್ಮನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಲು ಬಯಸಿದ್ದರು. ಆಗ ನಾನು ನಯವಾಗಿಯೇ ನಿರಾಕರಿಸಿ ಪಕ್ಷದ ಮುಖಂಡರಾದ ವೈ.ಎಸ್.ವಿ.ದತ್ತ, ರಮೇಶ್ ಬಾಬು, ಕೋನರೆಡ್ಡಿ ಅಂಥವರಿಗೆ ಕೊಡಿ ಎಂದು ಹೇಳಿದ್ದೆ. ಕೊನೆ ಗಳಿಗೆಯಲ್ಲಿ ರಮೇಶ್ ಗೌಡ ಅವರಿಗೆ ಸ್ಥಾನ ಸಿಕ್ಕಿದೆ. ರಮೇಶ್‍ಗೌಡ ಸಕ್ರಿಯವಾಗಿರಲಿಲ್ಲ. ಅಂಥವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡಿದ್ದು ಪಕ್ಷದ ದೃಷ್ಟಿಯಿಂದ ಸರಿಯಾದ ಬೆಳವಣಿಗೆಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜೂನ್‍ನಲ್ಲಿ ಮತ್ತೆ ವಿಧಾನಪರಿಷತ್ ಚುನಾವಣೆ ಬರುತ್ತದೆ ಅಲ್ಲಿಯವರೆಗೂ ಕಾಯುವುದು ಬೇಡ. ರಮೇಶ್‍ಗೌಡ ಅವರಿಂದ ರಾಜೀನಾಮೆಯನ್ನು ಕೊಡಿಸಿ ಆ ಸ್ಥಾನವನ್ನು ಒಳ್ಳೆಯವರಿಗೆ ಕೊಟ್ಟರೆ ಒಳ್ಳೆಯದಾಗಲಿದೆ ಎಂದರು.
ಇನ್ನು ಜೆಡಿಎಸ್ ಕಾರ್ಯಾಧ್ಯಕ್ಷರಾಗಿದ್ದರೂ ತಾನು ಕ್ರಿಯಾಶೀಲವಾಗಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಲೋಕಸಭಾ ಚುನಾವಣೆ ನಂತರ ಪಕ್ಷದಿಂದ ದೂರ ಉಳಿದಿದ್ದೇನೆ. ಒಂದು ವೇಳೆ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ಕೊಡುತ್ತೇನೆ. ಇಲ್ಲವೇ ಅವರೇ ನನ್ನನ್ನು ತೆಗೆದು ಹಾಕಬಹುದು ಎಂದು ಹೇಳಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‍ನವರು ನಮ್ಮನ್ನು ಸಂಪರ್ಕಿಸಿದ್ದಾರೆ. ಹಾಗಂತ ಪಕ್ಷ ಬಿಟ್ಟು ಹೋಗುವುದು ಸರಿಯಲ್ಲ. ಒಂದು ವೇಳೆ ತಾವು ಜೆಡಿಎಸ್ ಪಕ್ಷ ಬಿಟ್ಟು ಹೋಗುವ ಸಂದರ್ಭ ಬಂದರೆ ಬಹಿರಂಗವಾಗಿ ಹೇಳಿಯೇ ಹೋಗುತ್ತೇನೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ