
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಕೆಲಸ ಉಳಿಸಿಕೊಳ್ಳಲೆಂದು ತಾವು ಹೆತ್ತ ಮೂರನೇ ಮಗುವನ್ನು ಕಾಡಿನಲ್ಲಿ ಕಲ್ಲುಗಳ ಮೇಲೆ ಇಟ್ಟು ತಂದೆ-ತಾಯಿ ಬಂದಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ.
ಅದಾಗಲೇ ಮೂವರು ಮಕ್ಕಳನ್ನು ಹೊಂದಿದ್ದ ಶಿಕ್ಷಕ ದಂಪತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶಿಕ್ಷಕಿ ತಾಯಿ ಮತ್ತೆ ಗರ್ಭಿಣಿಯಾಗಿದ್ದು, ಎಲ್ಲರಿಂದ ವಿಷಯ ಮುಚ್ಚಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾಳೆ. ಹೆಚ್ಚು ಮಕ್ಕಳನ್ನು ಹೊಂದಿದರೆ ಸರ್ಕಾರಿ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಲ್ಲಿ ದಂಪತಿ ಆಗತಾನೇ ಹುಟ್ಟಿದ ಶಿಶುವನ್ನು ಕಾಡಿನಲ್ಲಿ ಬಿಟ್ಟುಬಂದಿದ್ದಾರೆ.
72 ಗಂಟೆಗಳ ಕಾಲ ಕಂದಮ್ಮ ಕಾಡಿನೊಳಗೆ ಕಲ್ಲಿನ ಮೇಲೆ ಉಸಿರು ಬಿಗಿಹಿಡಿದುಕೊಂಡು ಬದುಕಿದೆ. ಅಚ್ಚರಿ ಎನಿಸಿದರೂ ನಿಜ. ಕಲ್ಲಿನ ಮೇಲೆ ಮಲಗಿದ್ದ ಕಂದಮ್ಮನಿಗೆ ಇರುವೆಗಳು ಮುತ್ತಿಕೊಂಡು ಕಚ್ಚಿವೆ. ಮಗು ಅಳುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಹುಡುಕುತ್ತಾ ಸಾಗಿದಾಗ ಮಗು ಕಲ್ಲಿನ ಮೇಲೆ ಇರುವೆಗಳ ಮಧ್ಯೆ ರಕ್ತಸಿಕ್ತವಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ತಕ್ಷಣ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದು ಆರೈಕೆ ಮಾಡಿ ರಕ್ಷಿಸಿದ್ದಾರೆ.
ಮಗುವನ್ನು ಛಿಂದ್ವಾರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಪೋಷಕರಾದ ಬಬ್ಲು ದಾಂಡೋಲಿಯಾ ಹಾಗೂ ತಾಯಿ ರಾಜಕುಮಾರಿ ದಾಂಡೋಲಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.