ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಉದ್ದೇಶ ಬಿಜೆಪಿಗೆ ಇಲ್ಲ. ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಪರೇಷನ್ ಕಮಲಕ್ಕೆ ಬಲಿಯಾಗುವ ಸಾಧ್ಯತೆ ಇದ್ದು, ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಆರು ಸಚಿವರು ಸೇರಿದಂತೆ 20 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಚೌವ್ಹಾಣ್, ಕಮಲ್‍ನಾಥ್ ಸರ್ಕಾರ ಬೀಳಿಸುವ ಆಸಕ್ತಿ ಬಿಜೆಪಿಗಿಲ್ಲ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಇದು ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನದಿಂದ ಸಚಿವರು ಹೊರಬರುತ್ತಿದ್ದಾರೆ ಹೊರತು ಇದರ ಹಿಂದೆ ಬಿಜೆಪಿ ಕೈವಾಡ ಇಲ್ಲ ಎಂದಿದ್ದಾರೆ.
ಈ ನಡುವೆ ಬಿಜೆಪಿ ಉಖಂಡ ನರೋತ್ತರ್ ಮಿಶ್ರಾ ಕಮಲ್‍ನಾಥ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಕಮಲ್‍ನಾಥ್ ಜೊತೆ ಆರಂಭದಿಂದಲೂ ಕಾಂಗ್ರೆಸ್ ಪ್ರಭಾವಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಭಿನ್ನಾಭಿಪ್ರಾಯ ಹೊಂದಿದ್ದರು. ಈಗ ಕಾಂಗ್ರೆಸ್ ವರಿಷ್ಠರ ನಡೆಯಿಂದ ಬೇಸತ್ತ ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದ ತಂಡ ರಾಜೀನಾಮೆ ನೀಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ