Latest

ಸಿಎಂ ಕ್ಷೇತ್ರದಲ್ಲಿ ಖಾತೆ ಬದಲಾವಣೆಗೆ 25 ಸಾವಿರ ಲಂಚ; ಮುನ್ಸಿಪಾಲಿಟಿ ಗೋಡೆ ಕೂಡ ಕಾಸು ಕಾಸು ಎನ್ನುತ್ತಿದೆ; ಡಿ.ಕೆ.ಶಿವಕುಮಾರ್ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಮಾಗಡಿ: ರೈತ ಕೊಡುವ ಅನ್ನ, ಗುರು ಕಲಿಸುವ ಅಕ್ಷರ, ತಾಯಿ ನೀಡುವ ಆಶೀರ್ವಾದ, ಮತದಾರ ನೀಡುವ ಪ್ರೀತಿಯನ್ನು ಜಗತ್ತಿನಲ್ಲಿ ಯಾರೂ ಮರೆಯಲು ಸಾಧ್ಯವಿಲ್ಲ. ಇಂದು ಮಾಗಡಿಯಲ್ಲಿ ನನಗೆ ಅದ್ಧೂರಿ ಸ್ವಾಗತ ನೀಡಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಪ್ರತಿಜ್ಞೆ ಮಾಡಿದ್ದೀರಿ. ನನಗೆ ಆಶೀರ್ವಾದ ಮಾಡಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ನಿಮ್ಮೆಲ್ಲರಿಗೂ ಕೋಟಿ ನಮನಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಾಗಡಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಡಿದ ಡಿ.ಕೆ.ಶಿವಕುಮಾರ್, ಬಾಲಕೃಷ್ಣ ಹಾಗೂ ರೇವಣ್ಣ ಅವರ ಕಾಲದಲ್ಲಿ ಇಬ್ಬರೂ ತಮ್ಮದೇ ಆದ ಸಾಕ್ಷಿ ಗುಡ್ಡೆ ಬಿಟ್ಟಿದ್ದಾರೆ. ಈಗಿನ ಶಾಸಕರು ಯಾವ ಕೆಲಸ ಮಾಡಿದ್ದಾರೆ? ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹಾಗೂ ರಾಜ್ಯದಲ್ಲಿ ಬಂಗಾರಪ್ಪ, ಕೃಷ್ಣ ಮತ್ತು ಸಿದ್ದರಾಮಯ್ಯ ಅವರ ಕಾಲದಲ್ಲಿನ ಕಾರ್ಯಕ್ರಮಗಳನ್ನು ಸ್ಮರಿಸುತ್ತೇವೆ.

ನಾವು ಇಂದು ರೈತರು, ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಆದಾಗ ಮೋದಿ ಅವರು ನೀವು ಮತ ಹಾಕುವಾಗ ಸಿಲಿಂಡರ್ ನೋಡಿಕೊಂಡು ಹೋಗಿ ಮತ ಹಾಕಿ ಎಂದಿದ್ದರು. ನಾನು ಕೂಡ ಈಗ ಅವರ ಮಾತನ್ನೇ ಹೇಳುತ್ತೇನೆ. ನೀವು ಕೂಡ ಸಿಲಿಂಡರ್ ಬೆಲೆ 410 ರಿಂದ 1200 ರೂ. ಆಗಿರುವುದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿ. ನೀವು ಮತ ಹಾಕಿದಾಗ ಬರುವ ಮತಯಂತ್ರದ ಕುಯ್ ಎಂಬ ಸದ್ದು ಮೋದಿ ಅವರಿಗೆ ಕೇಳಿಸಬೇಕು ಎಂದರು

ಕಾಂಗ್ರೆಸ್ ಪಕ್ಷ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದು ನೀವು ಹಸಿವಿನಿಂದ ಮಲಗುವುದನ್ನು ತಪ್ಪಿಸಬೇಕೆಂಬ ಗುರಿ ಹೊಂದಿದೆ . ರೈತನಿಗೆ ಸಂಬಂಳ, ಪಿಂಚಣಿ, ಬಡ್ತಿ, ಲಂಚ ಯಾವುದೂ ಇಲ್ಲ. ಈ ರೈತನನ್ನು ಉಳಿಸಲು ನಾವು ಶ್ರಮಿಸಬೇಕು. ಹಾಲು ಉತ್ಪಾದಕರಿಗೆ ಕಾಂಗ್ರೆಸ್ ಸರ್ಕಾರ 5 ರೂ. ಪ್ರೋತ್ಸಾಹ ಧನ ನೀಡಿತ್ತು. ಆದರೆ ಈಗ ಹಸುಗಳ ಮೇವಿನ ಬೆಲೆ, ಗೊಬ್ಬರದ ಬೆಲೆ ಹೆಚ್ಚಾಗಿದೆ. ಆದರೆ ಹಾಲಿನ ದರ ಮಾತ್ರ ಏರಿಕೆಯಾಗಿಲ್ಲ.

ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕಾಲದಲ್ಲಿ ಯಾವ ಸಾಧನೆ ಮಾಡಿದ್ದಾರೆ? ನಿಮ್ಮ ಬದುಕಿನಲ್ಲಿ ಯಾವ ಬದಲಾವಣೆ ತಂದಿದ್ದಾರೆ? ನಾನು ಇಂಧನ ಸಚಿವನಾಗಿದ್ದಾಗ ನಿಮಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಕೊಟ್ಟು, 10 ಹೆಚ್ ಪಿ ವಿದ್ಯುತ್ ಕೊಟ್ಟೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನಿಗೆ ಭೂಮಿ, ಬದರ್ ಪುಕ್ಕುಂ ಸಾಗುವಳಿ ನೀಡಿದ್ದೇವೆ. ಬ್ಯಾಂಕುಗಳ ರಾಷ್ಟ್ರೀಕರಣ, ಸ್ತ್ರೀ ಶಕ್ತಿ ಸಂಘಗಳ ಸಾಲದಂತಹ ಕಾರ್ಯಕ್ರಮ ನೀಡಿದ್ದೇವೆ ಎಂದರು.

ಮೋದಿ ಅವರು ಬಂದು ನನ್ನನ್ನು ಗೆಲ್ಲಿಸಿ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅವರು ಹೇಳಿದಂತೆ ಏನಾದರೂ ಮಾಡಿದರಾ? ಇಲ್ಲ. ಹೀಗಾಗಿ ಜನರಿಗೆ ಅನುಕೂಲಕರ ಕಾರ್ಯಕ್ರಮ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ನೀವೆಲ್ಲರೂ ನಂಬಿದ್ದೀರಿ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಬೇರು ಇಲ್ಲದಿದ್ದರೆ ಮರ ಉಳಿಯಲ್ಲ, ಅದೇ ರೀತಿ ನಂಬಿಕೆ ಇಲ್ಲದಿದ್ದರೆ ಸಂಬಂಧ ಉಳಿಯುವುದಿಲ್ಲ. ಹೀಗಾಗಿ ನಾವು ನಂಬಿಕೆ ಇಟ್ಟುಕೊಂಡು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ನೆಹರೂ ಅವರ ಕಾಲದಿಂದಲೂ ನುಡಿದಂತೆ ನಡೆಯುತ್ತಾ ಬಂದಿದೆ.

ನಾವು ಶಿಂಷಾ ಹೊಳೆಯಿಂದ ಕಾವೇರಿ ನದಿ ನೀರು ತಂದ್ದು ಈ ಭಾಗಕ್ಕೆ ನೀಡಿದ್ದೇವೆ. ಈ ಕೆಲಸ ನಮ್ಮದು ಎಂದು ದಳದವರು ಬಿಜೆಪಿಯ ಅಶ್ವತ್ಥ್ ನಾರಾಯಣ ಅವರು ಹೇಳಲು ಸಾಧ್ಯವೇ? ರಾಮನಗರ ಜಿಲ್ಲೆ ಕ್ಲೀನ್ ಮಾಡುತ್ತೇವೆ ಎಂದಿದ್ದ ಅಶ್ವತ್ಥ್ ನಾರಾಯಣ ಜಿಲ್ಲೆಯಲ್ಲಿ ಒಂದು ಸಣ್ಣ ಕೆಲಸ ಮಾಡಲಿಲ್ಲ. ಬೈಲಮಂಗಲದ ಕೊಳಚೆನೀರನ್ನು ಸ್ವಚ್ಛ ಮಾಡಲು ಅವರಿಂದ ಆಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಯಾವ ಕೆಲಸವೂ ಆಗಿಲ್ಲ. ಮಾತು ಕೊಡುವುದು ಮುಖ್ಯವಲ್ಲ, ಕೊಟ್ಟ ಮಾತು ಉಳಿಸಿಕೊಳ್ಳುವುದು ಮುಖ್ಯ.

ಕಾಂಗ್ರೆಸ್ ಪಕ್ಷ ಜನರಿಗೆ ಅನುಕೂಲವಾಗಲು 3 ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದ್ದು, ನೀವ್ಯಾರೂ ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ. ಈ ಯೋಜನೆ ಮೂಲಕ ಪ್ರತಿ ತಿಂಗಳು 1500 ರೂಪಾಯಿಯಂತೆ ವರ್ಷಕ್ಕೆ 18 ಸಾವಿರ ರೂ. ಉಳಿತಾಯ ಮಾಡಬಹುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂ. ನಂತೆ ವರ್ಷಕ್ಕೆ 24 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಈ ಎರಡು ಯೋಜನೆಗಳ ಮೂಲಕ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2.10 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುತ್ತೇವೆ. ಈ ಯೋಜನೆಗಳ ಕುರಿತು ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರಂಟಿ ಕಾರ್ಡ್ ಗೆ ಸಹಿ ಮಾಡಿದ್ದು, ಈ ಕಾರ್ಡ್ ಅನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಬೇಕು ಎಂದು ಹೇಳಿದರು.

ಬಾಲಕೃಷ್ಣ ಅವರು ಸಕ್ರಿಯ ರಾಜಕಾರಣಿ. ಜನರ ಕಷ್ಟ ಸುಖದಲ್ಲಿ ಅವರು ಭಾಗಿಯಾಗಿದ್ದಾರೆ. ಅವರು ನಾಲ್ಕು ಬಾರಿ ಶಾಸಕನಾಗಿದ್ದಾರೆ. ಇದು ಸುಲಭದ ಮಾತಲ್ಲ. ಅವರು ಈ ಊರಿನವರು, ನಿಮ್ಮ ಮನೆ ಮಗ. ನಾನು ಕೂಡ ಇದೇ ಜಿಲ್ಲೆಯವನು, ಹೊರಗಿನಿಂದ ಬಂದಿಲ್ಲ. ನಾನು ಸತ್ತರೆ ದೊಡ್ಡಆಲಹಳ್ಳಿಗೇ ನನ್ನ ಹೆಣ ಹೋಗುತ್ತದೆ. ನಾವು ಎಲ್ಲರಿಗೂ ಸಹಾಯ ಮಾಡಿದ್ದೇವೆ. ಕುಮಾರಣ್ಣ ಅವರು ಮುಖ್ಯಮಂತ್ರಿಯಾಗಲು ಬೆಂಬಲ ನೀಡಿದ್ದು ಕಾಂಗ್ರೆಸ್. ದೇವೇಗೌಡರನ್ನು ಮಾಜಿ ಪ್ರಧಾನಿ ಎಂದು ಕರೆಯುವಂತೆ ಮಾಡಲು ಕಾಂಗ್ರೆಸ್ ತ್ಯಾಗ ಮಾಡಿದೆ. ಇದನ್ನು ನೀವು ಆಲೋಚಿಸಬೇಕು. ನಾನು ನಿಮ್ಮ ಮಗನಾಗಿದ್ದು, ನನಗೂ ಒಂದು ಅವಕಾಶ ನೀಡಿ ಎಂದು ದಳದ ಕಾರ್ಯಕರ್ತರಲ್ಲೂ ಮನವಿ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇವೆ. ಇಲ್ಲಿ ಕೇವಲ ಬಾಲಕೃಷ್ಣ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುಮಾರ್ ಅಭ್ಯರ್ಥಿಯಾಗಿದ್ದಾರೆ ಎಂದು ಆಶೀರ್ವಾದ ಮಾಡಿ.

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ನೆಹರೂ ಸೇರಿದಂತೆ ಮಹಾನ್ ನಾಯಕರು ಕೂತ ಜಾಗದಲ್ಲಿ ಕೂತಿದ್ದಾರೆ. ಅವರಿಗೆ ಶಕ್ತಿ ನೀಡಿ ಕರ್ನಾಟಕ ರಾಜ್ಯದ ಸ್ವಾಭಿಮಾನ ಉಳಿಸಬೇಕು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಹೀಗಾಗಿ ನೀವು ಕೈ ಜತೆ ಕೈ ಜೋಡಿಸಬೇಕು ಎಂದು ಪ್ರಾರ್ಥಿಸುತ್ತೇನೆ. ನಾವು ಬೆಳಗ್ಗೆ ಎದ್ದಾಗ ದೇವರ ಫೋಟೋ ನೋಡುವ ಬದಲು ಕೈ ನೋಡಿ ದೇವರನ್ನು ಪ್ರಾರ್ಥಿಸುತ್ತೇವೆ. ಈ ಹಸ್ತ ಒಣಗುವುದೂ ಇಲ್ಲ, ಬಾಡುವುದೂ ಇಲ್ಲ. ಈ ಕೈಗೆ ಶಕ್ತಿ ತುಂಬಲು ನೀವೆಲ್ಲರೂ ನಿಮ್ಮ ಸ್ನೇಹಿತರು ಸಂಬಂಧಿಕರಿಗೆ ಹೇಳಿ ಕಾಂಗ್ರೆಸ್ ಗೆ ಮತ ಹಾಕಿಸಬೇಕು.

ಕಳೆದ ಚುನಾವಣೆಯಲ್ಲಿ ಬಾಲಕೃಷ್ಣ ಅವರು ಗೆಲ್ಲುತ್ತಾರೆ ಎಂದು ಭಾವಿಸಿದ್ದೆ. ಪಾಪ ಅವರಿಗೆ ಅನ್ಯಾಯವಾಗಿದೆ. ನಾವು ಸೋಲು ಒಪ್ಪಿದ್ದೇವೆ. ಆದರೆ ನೀವು ಮತ ಹಾಕಿದವರಿಂದ ನಿಮಗೆ ನ್ಯಾಯ ಸಿಕ್ಕಿದೆಯಾ? ಅವರ ಬಗ್ಗೆ ನಿಮಗೆ ತೃಪ್ತಿ ಇದೆಯಾ? ನೀವು ದಳದವರಿಗೂ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮಾಡಬೇಕು.

ಮುಂದೆ ರಾಜ್ಯದಲ್ಲಿ ಬಿಜೆಪಿಯೂ ಅಧಿಕಾರಕ್ಕೆ ಬರಲ್ಲ, ದಳವೂ ಅಧಿಕಾರಕ್ಕೆ ಬರುವುದಿಲ್ಲ. ಕುಮಾರಣ್ಣ ಮಾತ್ರ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಅದು ಹೇಗೆ? ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 140, ಬಿಜೆಪಿ 65 ಕ್ಷೇತ್ರ ಗೆಲ್ಲಲಿದೆ. ನಿನ್ನೆ ಪುಟ್ಟಣ್ಣ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರು ಪರಿಷತ್ ಸದಸ್ಯ ಸ್ಥಾನದ ಅವಧಿ ನಾಲ್ಕೂವರೆ ವರ್ಷ ಇದ್ದರೂ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕೋಲಾರದ ಶ್ರೀನಿವಾಸ್ ಗೌಡ, ಗುಬ್ಬಿಯ ಶ್ರಿನಿವಾಸ್, ಅರಸಿಕೆರೆ ಶಿವಲಿಂಗೇಗೌಡ, ಕಡೂರು ವೈಎಸ್ ವಿ ದತ್ತಾ, ತೀರ್ಥಹಳ್ಳಿ ಮಂಜುನಾಥ ಗೌಡ, ಕೋನರೆಡ್ಡಿ, ಸೊರಬದ ಮಧುಬಂಗಾರಪ್ಪ ಇವರೆಲ್ಲ ಕಾಂಗ್ರೆಸ್ ಸೇರಿದ್ದಾರೆ. ಇವರೆಲ್ಲ ಶಾಸಕರಾಗಿದ್ದವರು, ಯಾಕೆ ಜೆಡಿಎಸ್ ಬಿಟ್ಟು ಬರುತ್ತಿದ್ದಾರೆ? ನಿಮ್ಮ ಕ್ಷೇತ್ರದಲ್ಲಿ ಈ ಪ್ರಶ್ನೆ ಕೇಳಬೇಕು. ನೀವು ಮತ್ತೆ ಯಾಮಾರಲು ಹೋಗಬೇಡಿ. ನಿಮ್ಮ ಮನೆ ಬಾಗಿಲಿಗೆ ಮಹಾಲಕ್ಷ್ಮಿ ಬಂದಿದ್ದು, ನೀವು ಈ ಅವಕಾಶ ಬಿಡಬೇಡಿ.

ಬಿಜೆಪಿ ಭ್ರಷ್ಟ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಖಾತೆ ಬದಲಾವಣೆಗೆ 25 ಸಾವಿರ ನೀಡಿದ್ದರೂ ನೂತನ ಅಧಿಕಾರಿಗೆ ಮತ್ತೆ 25 ಸಾವಿರ ನೀಡಬೇಕು. ಆತನ ಬಳಿ ಹಣವಿಲ್ಲದೆ ತನ್ನ ದನವನ್ನು ಕೊಟ್ಟು ಕೆಲಸ ಮಾಡಿಕೊಡಿ ಎಂದು ಹೇಳಿದ್ದಾರೆ. ಮಾಗಡಿಯಲ್ಲೂ ಇದೇ ಪರಿಸ್ಥಿತಿ ಇದೆ. ಮುನ್ಸಿಪಾಲಿಟಿ ಕಚೇರಿ ಗೋಡೆ ಮುಟ್ಟಿದರೆ ಕಾಸು ಕಾಸು ಎನ್ನುತ್ತಿವೆ. ನೀವು ಇದೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೈತರು, ಬಡವರು ಎಲ್ಲ ವರ್ಗದ ಜನರಿಗೆ ಸಹಾಯವಾಗುವ ಆಡಳಿತ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ. ನಾವು ನಿಮ್ಮ ಸೇವಕರಾಗಿ ಕೆಲಸ ಮಾಡಿ ಋಣ ತೀರುತ್ತೇವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button