ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ನಿರ್ದೇಶನಗಳನ್ನು ಪಾಲಿಸಿ ಕಾಮಗಾರಿ ಆರಂಭಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಮಹದಾಯಿ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ಕಾಮಗಾರಿ ಆರಂಭಿಸಲು ಅನುಮತಿ ನೀಡದಂತೆ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸಿದ ಸುಪ್ರೀಂ ನ್ಯಾ.ಡಿ ವೈ ಚಂದ್ರಚೂಡ್ ನೇತೃತ್ವದ ದ್ವಿ ಸದಸ್ಯ ಪೀಠ ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅನುಮತಿ ಪಡೆಯಲು ಸೂಚಿಸಿದೆ.
ಗೋವಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ, ಗೆಜೆಟ್ ನೋಟಿಫಿಕೇಷನ್ ಆಗುತ್ತಿದ್ದಂತೆ ಕರ್ನಾಟಕ ಕಾಮಗಾರಿ ಆರಂಭಿಸಲು ಮುಂದಾಗಿದೆ. ಕೂಡಲೇ ಕಾಮಗಾರಿ ಆರಂಭಿಸುವುದಾಗಿ ಕರ್ನಾಟಕ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಕರ್ನಾಟಕದ ಈ ನಡೆ ನೋಡಿದರೆ ನ್ಯಾಯಾಧಿಕರಣದ ಆದೇಶ ಉಲ್ಲಂಘಿಸಿ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ. ವಾಸ್ತವದಲ್ಲಿ ಸೆಪ್ಟೆಂಬರ್, ಅಕ್ಟೊಬರ್ ನಲ್ಲಿ ಕಳಸ ಬಂಡೂರಿ ನಾಲೆಯಲ್ಲಿ ಕಾಮಗಾರಿ ಆರಂಭಿಸಿದೆ. ಮಹದಾಯಿ ಕಣಿವೆ ವ್ಯಾಪ್ತಿಯಲ್ಲಿ ಐದು ಪಕ್ಷಿಧಾಮಗಳಿದ್ದು ಸುಪ್ರೀಂಕೋರ್ಟ್ ಅಂತಿಮ ತೀರ್ಪಿನವರೆಗೂ ಕಾಮಗಾರಿ ನಡೆಸಲು ಅವಕಾಶ ನೀಡದಂತೆ ಮನವಿ ಮಾಡಿದರು.
ಈ ವೇಳೆ ವಾದ ಮಂಡಿಸಿದ ಕರ್ನಾಟಕ ಪರ ವಕೀಲರು ನಾವು ನಿಯಮಗಳನ್ನು ಪಾಲಿಸಿಯೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ನ್ಯಾಯಾಧಿಕರಣದ ನಿರ್ದೇಶನಗಳನ್ನು ಪಾಲಿಸಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿ ಅರ್ಜಿ ವಿಲೀವಾರಿ ಮಾಡಿತು.
ಕಾಮಗಾರಿಗೂ ಮುನ್ನ ಡಿಪಿಆರ್ ಸಲ್ಲಿಸಬೇಕು, ಕೇಂದ್ರ ಸರ್ಕಾರದಿಂದ ಯೋಜನೆಗೆ ಅನುಮತಿ ಪಡೆಯಬೇಕು, ಅರಣ್ಯ ಮತ್ತು ಪರಿಸರ ಇಲಾಖೆ, ವನ್ಯಜೀವಿ ಸಂರಕ್ಷಣಾ ಇಲಾಖೆ ಸೇರಿ ಯೋಜನೆಗೆ ಅಗತ್ಯವಿರುವ ಇಲಾಖೆಗಳ ಒಪ್ಪಿಗೆ ಪಡೆದುಕೊಂಡು ಕಾಮಗಾರಿ ಆರಂಭಿಸಬೇಕು ಹಾಗೂ ಅನುಮತಿ ಪಡೆಯದೆ ಕಾಮಗಾರಿ ಆರಂಭಿಸುವುದಾಗಲೀ ನೀರು ಬಳಕೆ ಮಾಡುವುದಾಗಲಿ ಮಾಡುವಂತಿಲ್ಲ ಎಂಬ ನ್ಯಾಯಾಧೀಕರಣದ ನಿರ್ದೇಶನಗಳನ್ನು ಪಾಲಿಸುವಂತೆ ಸುಪ್ರೀಂ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ