Belagavi NewsBelgaum NewsLatest

*ಕುಂಭಮೇಳದಿಂದ ವಾಪಾಸ್ ಆಗುವಾಗ ಅಪಘಾತ: ಮೃತರ ಕುಟುಂಬದ ನೆರವಿಗೆ ಧಾವಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ*

ಪ್ರಗತಿವಾಹಿನಿ ಸುದ್ದಿ: ಮಹಾಕುಂಭ ಮೇಳದಿಂದ ವಾಪಾಸ್ ಆಗುತಿದ್ದ ಬೆಳಗಾವಿಯ ನಾಲ್ವರು ಅಪಘಾತಕ್ಕೆ ಬಲಿಯಾಗಿರುವ ಸುದ್ದಿ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸೂಚನೆ ಮೇರೆಗೆ ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್, ಮೃತರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾರೆ.

ಬೆಳಗಾವಿಯ ಗಣೇಶಪುರಕ್ಕೆ ಧಾವಿಸಿದ ಮೃಣಾಲ್ ಹೆಬ್ಬಾಳ್ಕರ್, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಮೃತದೇಹ ತರುವುದು ಸೇರಿದಂತೆ ಎಲ್ಲ ನೆರವಿನ ಭರವಸೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸುಮಾರು 50 ಜನ ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದರು. ಈ ಪೈಕಿ ಒಂದು ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದು, 16 ಮಂದಿಗೆ ಗಾಯಗಳಾಗಿವೆ. ಸ್ಥಳೀಯರ ಮೂಲಕ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ವಿಷಯ ತಿಳಿಯಿತು. ಇದೀಗ ಸಚಿವರ ಸೂಚನೆಗೆ ಮೇರೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿರುವೆ ಎಂದು ಮೃಣಾಲ್ ಹೆಬ್ಬಾಳಕರ್ ಹೇಳಿದರು.

ಮಧ್ಯಪ್ರದೇಶದ ಇಂಧೋರ್ ಆಸ್ಪತ್ರೆಯಲ್ಲಿ ಮೃತದೇಹಗಳಿದ್ದು, ಬೆಳಗಾವಿಗೆ ಮೃತದೇಹಗಳನ್ನು ತರುವ ವ್ಯವಸ್ಥೆ ಮಾಡಬೇಕು ಎಂದು ಸಚಿವರು ನಮಗೆ ಆದೇಶ ಮಾಡಿದ್ದಾರೆ. ಕುಟುಂಬಸ್ಥರು, ಬೆಳಗಾವಿ ಜಿಲ್ಲಾಡಳಿತ ಹಾಗೂ ಇಂದೋರ್ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಮೃತ ದೇಹಗಳನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಒಂದು ಮೃತ ದೇಹವನ್ನು ಇಂದೋರ್‌ನಿಂದ ಬೆಳಗಾವಿಗೆ ತರಲು ಸುಮಾರು 95 ಸಾವಿರ ರೂಪಾಯಿ ಖರ್ಚಾಗಲಿದೆ. ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಸಾಧ್ಯವಾದಷ್ಟು ನೆರವು ನೀಡಲಾಗುವುದು ಎಂದು ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button