Kannada NewsLatestNational

*ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬೆಂಕಿ, ವೆಂಟಿಲೇಟರ್ ಸ್ಫೋಟ; ಮೂರು ನವಜಾತ ಶಿಶುಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಜಿಲ್ಲಾಸ್ಪತ್ರೆಯಲ್ಲಿ ನವಜಾತಶಿಶುಗಳ ತೀವ್ರನಿಗಾ ಘಟಕದಲ್ಲಿ ವೆಂಟಿಲೇಟರ್ ಸ್ಫೋಟಗೊಂಡು ಮೂರು ಶಿಶುಗಳು ಮೃತಪಟ್ತಿದ್ದು, ಆರು ಶಿಶುಗಳ ಸ್ಥಿತಿ ಗಂಭೀರವಗೈರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲಾಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಂದು ಮುಂಜಾನೆ ಭೀಕರ ಸ್ಫೋಟ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮೂರು ನವಜಾತ ಕಂದಮ್ಮಗಳು ಸಾವನ್ನಪ್ಪಿದ್ದು, ಆರು ಶಿಶುಗಳ ಸ್ಥಿತಿ ಗಂಭೀರವಾಗಿದೆ.

ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಎನ್‌ಐಸಿಯು ವಾರ್ಡ್‌ನಲ್ಲಿದ್ದ ವೆಂಟಿಲೇಟರ್ ಯಂತ್ರವು ಮುಂಜಾನೆ ಸುಮಾರು 3.30 ರ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ವಿಶೇಷ ನವಜಾತ ಆರೈಕೆ ಘಟಕದಲ್ಲಿ (SNCU) ಒಟ್ಟು 39 ನವಜಾತ ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು. ದಟ್ಟ ಹೊಗೆ ಆವರಿಸುತ್ತಿದ್ದಂತೆಯೇ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸ್‌ಗಳು ಮತ್ತು ಆಸ್ಪತ್ರೆ ಸಿಬ್ಬಂದಿ ತಕ್ಷಣ ವೈದ್ಯಕೀಯ ಸಂಪರ್ಕಗಳನ್ನು ಕಡಿತಗೊಳಿಸಿ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದರು.

ಸಿಬ್ಬಂದಿಯ ಹರಸಾಹಸದ ಹೊರತಾಗಿಯೂ ತೀವ್ರ ಸುಟ್ಟ ಗಾಯಗಳು ಮತ್ತು ಹೊಗೆಯಿಂದಾಗಿ ಉಸಿರುಗಟ್ಟಿ ಮೂರು ಶಿಶುಗಳು ಮೃತಪಟ್ಟಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಾಗೂ ಉಸಿರಾಟದ ತೊಂದರೆಗೆ ಒಳಗಾದ 6 ನವಜಾತ ಶಿಶುಗಳನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಬೆನ್ನಲ್ಲೇ ವೈದ್ಯಕೀಯ ಉಪಕರಣಗಳ ಸುರಕ್ಷತೆ ಮತ್ತು ಅಗ್ನಿಶಾಮಕ ಮುನ್ನೆಚ್ಚರಿಕೆಗಳ ವೈಫಲ್ಯದ ಕುರಿತು ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button