*ಮಹಾರಾಷ್ಟ್ರದಲ್ಲಿ ಅನಲಾಗ್ ಪನೀರ್ ಬಳಕೆಗೆ ನಿಷೇಧ: ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಸರ್ಕಾರ ಇದೀಗ ಹಾಲೇತರ ಪನೀರ್ ಅಥವಾ ಅನಲಾಗ್ ಪನೀರ್ ರ್ಬಳಕೆಯ ಮೇಲೆ ನಿಷೇಧ ಹೇರಿದೆ. ನೋಡಲು ಹಾಲಿನ ಪನೀರ್ ರೀತಿಯೇ ಇರುವ ಅನಲಾಗ್ ಪನೀರ್ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮಹಾರಾಷ್ಟ್ರ ರಾಜ್ಯದಾದ್ಯಂತ ಅನಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧ ಹೇರಿದರೂ ಅನಲಾಗ್ ಪನೀರ್ ಬಳಸುವವರಿಗೆ ಆಹಾರ ಭದ್ರತೆ ಮತ್ತು ಮಾನದಂಡಗಳ ಕಾಯ್ದೆ 2006ರ (FSSAI) ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅಸುರಕ್ಷಿತ ಆಹಾರದಿಂದ ಸಾವು ಸಂಭವಿಸಿದರೆ ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅನಲಾಗ್ ಪನೀರ್ ಅನ್ನು ಅಸಲಿ ಹಾಲಿನ ಪನೀರ್ ಎಂದು ನಂಬಿಸಿ ಮಾರಾಟ ಮಾಡುವುದು ಗ್ರಾಹಕರನ್ನು ಹಾದಿತಪ್ಪಿಸುವ ಮತ್ತು ಕಾನೂನುಬಾಹಿರ ವ್ಯಾಪಾರ ಜಾಲಕ್ಕೆ ಸೇರುತ್ತದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಸಿದೆ. ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಅನಲಾಗ್ ಪನೀರ್ ಎಂಬುದು ಸಾಂಪ್ರದಾಯಿಕ ಹಾಲಿನ ಕೊಬ್ಬಿನ (ಮಲೈ) ಬದಲಿಗೆ ಸಸ್ಯಜನ್ಯ ಎಣ್ಣೆ (ಪಾಮ್ ಆಯಿಲ್), ಸ್ಟಾರ್ಚ್ ಹಾಗೂ ಇತರ ರಾಸಾಯನಿಕಗಳನ್ನು ಬಳಸಿ ತಯಾರಿಸುವ ಹಾಲೇತರ ಪನೀರ್ ಉತ್ಪನ್ನವಾಗಿದೆ. ಆಹಾರ ಭದ್ರತಾ ಪ್ರಾಧಿಕಾರದ (FSSAI) ನಿಯಮಾವಳಿಗಳ ಪ್ರಕಾರ, ಪನೀರ್ ಅನ್ನು ಕೇವಲ ಹಾಲಿನಿಂದ ಮಾತ್ರ ತಯಾರಿಸಬೇಕು. ಅದರಲ್ಲಿ ಯಾವುದೇ ಪಿಷ್ಟ (ಸ್ಟಾರ್ಚ್) ಅಥವಾ ಹಾಲೇತರ ಕೊಬ್ಬನ್ನು ಸೇರಿಸುವಂತಿಲ್ಲ. FSSAI ಅನಲಾಗ್ ಪನ್ನೀರ್ ಮಾರಾಟಕ್ಕೆ ಅವಕಾಶ ನೀಡುತ್ತದೆಯಾದರೂ, ಅದನ್ನು ‘ಅನಲಾಗ್’ ಎಂದೇ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ.




