Latest

ಕೇಂದ್ರದ ನಡೆ ಜಮೀನ್ದಾರಿ ಪದ್ಧತಿ ಕಡೆ -ಎಚ್. ಕೆ. ಪಾಟೀಲ್

ಮಹಾರಾಷ್ಟ್ರದ ಮೊದಲ ಭೇಟಿಯಲ್ಲಿ ಕೇಂದ್ರದ ವಿರುದ್ದ ಪಾಟೀಲರ ರಣಕಹಳೆ

ಶಾಮ ಹಂದೆ,  ಮುಂಬಯಿ:  ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ದೊಡ್ಡ ಉದ್ಯಮಿಗಳ ಒತ್ತಡಕ್ಕೆ ಮಣಿದು ಆಯ್ದ ಉದ್ಯಮಿಗಳ ಲಾಭಕ್ಕಾಗಿ ರೈತ ಮತ್ತು ಕಾರ್ಮಿಕ ವರ್ಗವನ್ನು ಬೇರುಸಹಿತ ಕಿತ್ತೊಗೆಯುವ ಕಾಯ್ದೆ ಜಾರಿಗೊಳಿಸಿ ದೇಶದಲ್ಲಿ ಪುನಃ ಜಮೀನ್ದಾರಿ ವ್ಯವಸ್ಥೆಯನ್ನು ತರಲು ಬಿಜೆಪಿ ಸರ್ಕಾರ ಮುಂದಾಗಿದೆ.
ಈ ರೈತ ವಿರೋಧಿ ಕಾನೂನು ರದ್ದುಪಡಿಸುವ ತನಕ,ಹಳ್ಳಿ-ಹಳ್ಳಿಗಳಿಗೆ ಹೋಗಿ ರೈತರೊಂದಿಗೆ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ದ ಸಂಘರ್ಷ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ದ ರಣಕಹಳೆ ಊದಿದ್ದಾರೆ.

 ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಯ ಹೊಸ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಎಚ್. ಕೆ ಪಾಟೀಲ್ ಇಂದು ತಮ್ಮ ಮೊದಲ ಮಹಾರಾಷ್ಟ್ರ ಪ್ರವಾಸದಲ್ಲಿದ್ದರು. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಬಾಳಾಸಾಹೇಬ್ ಥೋರಾತ್, ಲೋಕೋಪಯೋಗಿ ಸಚಿವ ಅಶೋಕ್ ಚವಾಣ್, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಸಚಿವ ಕೆ. ಸಿ.ಪಡ್ವಿ,ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಡೆಟ್ಟಿವಾರ್, ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶ್ಮುಖ್, ಗೃಹ ರಾಜ್ಯ ಸಚಿವ ಸತೇಜ್ (ಬಂಟಿ) ಪಾಟೀಲ್, ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂಬಯಿಯ ತಿಲಕ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಚ್.ಕೆ ಪಾಟೀಲ್ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಟೀಕಿಸಿದರು. ಕೊರೋ ನಾ ಪರಿಸ್ಥಿಯ ಲಾಭವನ್ನು ಪಡೆದು ಕೇಂದ್ರ ಸರ್ಕಾರ ಕೃಷಿ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸುವ ಮೂಲಕ ರೈತರಿಗೆ ಮೋಸ ಮಾಡಿದೆ. ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವರು ಗುಡುಗಿದರು.
ಈ ಮಸೂದೆ ಕೃಷಿ ಮತ್ತು ರೈತರನ್ನು ಸಂಪೂರ್ಣವಾಗಿ ಉದ್ವಸ್ಥ ಗೊಳಿಸಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಅಸ್ಥಿತ್ವವೇ ಮುಗಿಯಲಿದ್ದು ರೈತರಿಗೆ ತಮ್ಮ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಬೇಕಾಗುತ್ತದೆ. ಅಲ್ಲದೆ ಇದರಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಹೊಸ ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆಯ ಬಂಧನವಿಲ್ಲದ ಪರಿಣಾಮ, ವ್ಯಾಪಾರಿ ಮತ್ತು ಉದ್ಯಮಿಗಳಿಂದ ದೊಡ್ಡ ಪ್ರಮಾಣದಲ್ಲಿ ರೈತರ ಶೋಷಣೆ ನಡೆಯಲಿದೆ. ಗುತ್ತಿಗೆ ಕೃಷಿಯ ನೆಪದಡಿ ದೊಡ್ಡ ಉದ್ಯಮಿಗಳು ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಮುಗಿಸಲಿದ್ದಾರೆ ಎಂದು ಪಾಟೀಲ್ ತಿಳಿಸಿದರು.
ಕೃಷಿ ಮತ್ತು ಮಾರುಕಟ್ಟೆ ರಾಜ್ಯಗಳ ವಿಷಯವಾಗಿದ್ದರೂ, ಮೋದಿ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದನ್ನು ಜಾರಿಗೆ ತಂದಿದೆ ಎಂದ ಪಾಟೀಲ್ ರು  ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದರು.

ಬಡವರ ಕೈ ಬಿಡದ ಪಕ್ಷ

ಕಾಂಗ್ರೆಸ್ ಪಕ್ಷ 2019 ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗೆ ಅನುಗುಣವಾಗಿ ಈ ಕಾನೂನು ರೂಪಿಸಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರು ಸುಳ್ಳು ಹೇಳಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ನ್ಯಾಯ’ ಯೋಜನೆಯ ಭರವಸೆ ನೀಡಿತ್ತು. ಬಡ ರೈತರನ್ನು ಒಳಗೊಂಡ ದೇಶದ ಬಡ ಜನರಿಗಾಗಿ ವಾರ್ಷಿಕ 72 ಸಾವಿರ ರೂ. ನಗದು ಪಾವತಿಸುವ ಭರವಸೆ ಮತ್ತು ‘ಮನರೇಗಾ’ದ ಅಡಿ ಕೆಲಸದ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸುವ ಭರವಸೆ ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. “ಕಾಂಗ್ರೆಸ್ ರೈತರಿಗೆ ಬೆಂಬಲವನ್ನು ನೀಡುವ ಪಕ್ಷವಾಗಿದೆ, ಅವರನ್ನು ಕೈ ಬಿಟ್ಟು ಖಾಸಗಿ ವ್ಯಾಪಾರಿಗಳ ಗುಲಾಮರನ್ನಾಗಿ ಮಾಡುವ ಪಕ್ಷವಲ್ಲ” ಎಂದು ಪಾಟೀಲ್ ಗುಡುಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button