Latest

*2024ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: 2024ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದೆ. ಹಿರಿಯ ಗಾಂಧಿವಾದಿ ಪ್ರೊ. ಜಿ. ಬಿ. ಶಿವರಾಜು ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಪ್ರಶಸ್ತಿಯು ಲಭಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಗ್ರಾಮ ಸ್ವರಾಜ್‌, ಅಸ್ಪೃಶ್ಯತೆ ನಿವಾರಣೆ, ಆರ್ಥಿಕ ಚಿಂತನೆಗಳು, ಖಾದಿ ಚಟುವಟಿಕೆ, ಜೀವನ, ಶಿಕ್ಷಣ ಮತ್ತಿತರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡ ಮಹನೀಯರು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಸಾಲಿನ ಪ್ರಶಸ್ತಿಗೆ ಭಾಜನರಾಗಿರುವ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೊಟ್ಟಿಗೆರೆಯ ಪ್ರೊ. ಜಿ. ಬಿ. ಶಿವರಾಜು ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಸಂಸ್ಥೆಗೆ ಅಕ್ಟೋಬರ್‌ 2, ಗಾಂಧಿ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರೊ. ಜಿ. ಬಿ. ಶಿವರಾಜು ಅವರ ಬಗ್ಗೆ:

ನಿವೃತ್ತ ಉಪನ್ಯಾಸಕರಾಗಿರುವ ಪ್ರೊ. ಜಿ.ಬಿ. ಶಿವರಾಜು ಅವರು ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಗಾಂಧಿ ವಿಚಾರಧಾರೆಯನ್ನು ರೂಪಿಸಲು ಶ್ರಮಿಸಿದ್ದಾರೆ. 73 ವರ್ಷದ ಇವರು ತಮ್ಮ ನಿವೃತ್ತಿ ವೇತನವನ್ನು ಗಾಂಧಿ ವಿಚಾರಗಳನ್ನು ಯುವ ಜನರಿಗೆ ತಲುಪಿಸಲು ವಿನಿಯೋಗಿಸುತ್ತಿದ್ದಾರೆ. ಗಾಂಧಿ ಪ್ರಣೀತ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮದ್ಯಪಾನ ಸಂಯಮ ಮಂಡಳಿಗಳ ಸಮನ್ವಯದ ಮೂಲಕ ಗಾಂಧಿ ವಿಚಾರಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಜೊತೆಗೆ, ಅರಸೀಕೆರೆಯಲ್ಲಿನ ಕಸ್ತೂರಬಾ ಗಾಂಧಿ ಆಶ್ರಮವನ್ನು ಪುನರುಜ್ಜೀವನಗೊಳಿಸಿದ್ದಾರೆ. ಮೂಡಿಗೆರೆಯ ಭಾರತಿ ಬೈಲ್ ಕೇಂದ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆ ಮಾರ್ನೋಮಿದೊಡ್ಡಿ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಟ್ರಸ್ಟ್‌ನ ಉಪಕೇಂದ್ರವನ್ನು ಸ್ಥಳೀಯರ ಸಹಕಾರದಿಂದ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಕಾರ್ಯಾಗಾರವಾಗಿ ಅಭಿವೃದ್ಧಿಪಡಿಸಿದ್ದಾರೆ.

ಸಂಸ್ಥೆಯ 20 ಎಕರೆಗೂ ಹೆಚ್ಚು ಭೂಮಿಯಲ್ಲಿ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಸ್ಥಳೀಯರ ಸಹಕಾರದೊಂದಿಗೆ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಬರಮತಿ ಮಾದರಿಯ ಆಶ್ರಮ ನಿರ್ಮಾಣ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ ಆಶ್ರಮದ ಮಾದರಿಯನ್ನು ನಿರ್ಮಿಸಿ ಗಾಂಧೀಜಿಯವರ ಬದುಕು ಸಾಧನೆಗಳನ್ನು ಯುವಜನರು ಹಾಗೂ ಗ್ರಾಮೀಣ ಭಾಗದ ಜನರಿಗೆ ಆಕರ್ಷಕವಾಗಿ ಅನಾವರಣಗೊಳಿಸಿದ್ದಾರೆ. ಗಾಂಧಿಸಾಹಿತ್ಯ ಸಂಘ, ಹರಿಜನ ಸೇವಕ ಸಂಘ ಮೊದಲಾದ ಸಂಸ್ಥೆಗಳನ್ನು ಪುನರಜ್ಜೀವಗೊಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯ ಬಗ್ಗೆ:

1984 ರ ಅಕ್ಟೋಬರ್ 2 ರಂದು ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದಲ್ಲಿ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನವು ಸ್ಥಾಪಿಸಿದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯು ಕಳೆದ 39 ವರ್ಷಗಳಿಂದ ಗಾಂಧಿ ವಿಚಾರಗಳನ್ನು ಹೊಸ ಪೀಳಿಗೆಯಲ್ಲಿ ಅಳವಡಿಸಲು ಅವಿರತವಾಗಿ ದುಡಿಯುತ್ತಿದೆ.

ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 5 ರಿಂದ 10 ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳು ಸೇರಿದಂತೆ ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.

ಇಲ್ಲಿನ ವಿದ್ಯಾರ್ಥಿಗಳು ತಾವೇ ನೇಯ್ದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ಬೆಳೆದ ಕೃಷಿ ಬೆಳೆಗಳಿಂದ ತಯಾರಿಸಿದ ಆಹಾರ ಸೇವಿಸುತ್ತಾರೆ. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ.

ರಾಜ್ಯ ಪಠ್ಯಕ್ರಮದ ಜೊತೆಗೆ ಗಾಂಧಿ ವಿಚಾರಧಾರೆಯ ಅನುಸಾರ ಕೃಷಿ, ನೂಲು ಮತ್ತು ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ ಮುಂತಾದ ಸ್ವಾವಲಂಬಿ, ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯು ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

2024ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್‌ 2 ರಂದು ಸಂಜೆ 4.30ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಜರುಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button