
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬಿಜೆಪಿ ಕಚೇರಿ ಕಸಗುಡಿಸುವ ಕೆಲಸ ಮುಗಿದಿದ್ದರೆ ದಯವಿಟ್ಟು ಅಥಣಿ ಕ್ಷೇತ್ರಕ್ಕೆ ಬನ್ನಿ. ಇನ್ನಾದರೂ ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ಶಾಸಕ ಮಹೇಶ್ ಕುಮಟಳ್ಳಿಗೆ ನ್ಯಾಯವಾದಿ ಪ್ರಮೋದ ಹಿರೇಮಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುತ್ತೇನೆ ಎಂದು ಹೇಳಿದ್ದ ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿ ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಮಟಳ್ಳಿ ಕೆಲವು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಇದು ಕ್ಷೇತ್ರದ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಬಗ್ಗೆ ನ್ಯಾಯವಾದಿ ಪ್ರಮೋದ ಹಿರೇಮಣಿ ಕಿಡಿಕಾರಿದ್ದು, ಬಿಜೆಪಿ ಕಚೇರಿ ಕಸಗುಡಿಸುವ ಕೆಲಸ ಮುಗಿದಿದ್ದರೆ ಅಥಣಿ ಕ್ಷೇತ್ರಕ್ಕೆ ಬನ್ನಿ. ಇನ್ನಾದರೂ ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ಹೇಳಿದ್ದಾರೆ.
ಮಹೇಶ ಕುಮಟಳ್ಳಿ ಕಳೆದ ಒಂದು ವಾರದಿಂದಲೂ ಕ್ಷೇತ್ರದ ಜನತೆಯ ಕೈಗೆ ಸಿಕ್ಕಿಲ್ಲವಂತೆ. ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿ ಹೋಗಿರುವ ಅಥಣಿ ತಾಲೂಕಿಗೆ ಬರಬೇಕಾದ ಪರಿಹಾರ ಬಂದಿಲ್ಲ. ಇದರಿಂದ ನೆರೆ ಸಂತ್ರಸ್ಥರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಇದರ ಬಗ್ಗೆ ಕಾಳಜಿ ವಹಿಸದೆ, ಇನ್ನೂ ಬೆಂಗಳೂರಲ್ಲೇ ಇರುವ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಸಂತ್ರಸ್ತರ ಬಗ್ಗೆ ಗಮನಹರಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ