*ಬೆಳಗಾವಿ ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹55.28 ಲಕ್ಷ ಮೌಲ್ಯದ ಮದ್ಯ ವಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೀನು ಸಾಗಾಟದ ಹೆಸರಿನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಕರ್ನಾಟಕಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಖದೀಮರ ಜಾಲವನ್ನು ಅಬಕಾರಿ ಪೊಲೀಸರು ಭೇದಿಸಿದ್ದಾರೆ.
ವಾಹನದ ಹೊರಭಾಗದಲ್ಲಿ ಮೀನು ತುಂಬಿದ ಟ್ರೇಗಳನ್ನು ಇಟ್ಟು, ಒಳಭಾಗದಲ್ಲಿ ಭಾರಿ ಪ್ರಮಾಣದ ಮದ್ಯದ ಬಾಕ್ಸ್ಗಳನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ಖದೀಮರ ತಂತ್ರವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ₹35.28 ಲಕ್ಷ ಮೌಲ್ಯದ ಬಿಗ್ ಬಾಸ್ ಬ್ರಾಂಡಿ ಮದ್ಯ ಹಾಗೂ ₹20 ಲಕ್ಷ ಮೌಲ್ಯದ ಕೋಲ್ಡ್ ಸ್ಟೋರೇಜ್ ವಾಹನವನ್ನು ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರ–ಕರ್ನಾಟಕ ಗಡಿ ಭಾಗದಲ್ಲಿ ಅಬಕಾರಿ ಅಧಿಕಾರಿಗಳು ಈ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವೈಭವ ಹೋಟೆಲ್ ಸಮೀಪದ ಬಾಜಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಒಸಿಯನ್ ಫಿಶರ್ ಹೆಸರಿನ ಕೋಲ್ಡ್ ಸ್ಟೋರೇಜ್ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಮೀನು ಸಾಗಾಟದ ವಾಹನವೆಂದು ಮೇಲ್ನೋಟಕ್ಕೆ ಕಂಡುಬಂದರೂ, ಅದರೊಳಗೆ ಅಕ್ರಮ ಮದ್ಯ ಸಾಗಾಟ ನಡೆಯುತ್ತಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟದ ಅಸಲಿ ಬಣ್ಣ ಬಯಲಾಗಿದೆ.
ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ಮದ್ಯ ಸಾಗಾಟ!
ಅಕ್ರಮ ಮದ್ಯ ಸಾಗಾಟಗಾರರು ಪೊಲೀಸರ ಕಣ್ಣಿಗೆ ಮಣ್ಣೆರಚಲು ಸಿನಿಮೀಯ ತಂತ್ರ ಅನುಸರಿಸಿದ್ದರು. ವಾಹನದ ಹೊರಭಾಗದಲ್ಲಿ ಮೀನು ತುಂಬಿದ ಟ್ರೇಗಳನ್ನು ಜೋಡಿಸಿ, ಅದರ ಒಳಭಾಗದಲ್ಲಿ ಮದ್ಯದ ಬಾಕ್ಸ್ಗಳನ್ನು ಅಡಗಿಸಿಟ್ಟಿದ್ದರು. ಮೀನು ಸಾಗಾಟದ ವಾಹನವೆಂದು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡು ಗೋವಾದಿಂದ ಮದ್ಯವನ್ನು ಸಾಗಿಸಲು ಮುಂದಾಗಿದ್ದರು ಎನ್ನಲಾಗಿದೆ.
ಆದರೆ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಈ ತಂತ್ರ ವಿಫಲವಾಗಿದೆ. ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಅಡಗಿಸಿಟ್ಟಿದ್ದ ಬಿಗ್ ಬಾಸ್ ಬ್ರಾಂಡಿ ಮದ್ಯದ ಬಾಕ್ಸ್ಗಳು ಪತ್ತೆಯಾಗಿವೆ.
350 ಬಾಕ್ಸ್ಗಳಲ್ಲಿ ಮದ್ಯ ಪತ್ತೆ
ವಾಹನದಲ್ಲಿ 180 ಎಂಎಲ್ ಅಳತೆಯ ಬಾಟಲಿಗಳಿರುವ ಒಟ್ಟು 350 ಬಾಕ್ಸ್ಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ ₹35.28 ಲಕ್ಷ ಎಂದು ಅಂದಾಜಿಸಲಾಗಿದೆ. ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ ಸುಮಾರು ₹20 ಲಕ್ಷ ಮೌಲ್ಯದ ಕೋಲ್ಡ್ ಸ್ಟೋರೇಜ್ ವಾಹನವನ್ನು ಕೂಡ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದಾಳಿ ಕಂಡು ವಾಹನ ಬಿಟ್ಟು ಪರಾರಿ
ಅಬಕಾರಿ ಅಧಿಕಾರಿಗಳು ವಾಹನದ ಮೇಲೆ ದಾಳಿ ನಡೆಸುತ್ತಿದ್ದಂತೆ ಅದರಲ್ಲಿದ್ದವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಅಕ್ರಮ ಮದ್ಯ ಸಾಗಾಟದ ಹಿಂದೆ ಯಾರಿದ್ದಾರೆ? ಈ ಜಾಲದಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ? ಗೋವಾದಿಂದ ಕರ್ನಾಟಕಕ್ಕೆ ಮದ್ಯ ಸಾಗಾಟ ಮಾಡಲು ಯಾರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು? ಎಂಬ ಹಲವು ಪ್ರಶ್ನೆಗಳು ಮೂಡಿವೆ.
ಮೀನು ಸಾಗಾಟದ ಸೋಗಿನಲ್ಲಿ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿರುವ ಅಬಕಾರಿ ಅಧಿಕಾರಿಗಳು, ಪರಾರಿಯಾದವರ ಪತ್ತೆಗಾಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಿನಿಮಾದಲ್ಲಿ ಕಾಣುವ ರೀತಿಯ ತಂತ್ರ ಬಳಸಿ ಅಕ್ರಮ ಮದ್ಯ ಸಾಗಾಟಕ್ಕೆ ಮುಂದಾಗಿದ್ದ ಖದೀಮರಿಗೆ ಅಬಕಾರಿ ಪೊಲೀಸರ ಕಾರ್ಯಾಚರಣೆ ಬಿಸಿ ಮುಟ್ಟಿಸಿದೆ. ಗಡಿ ಭಾಗದಲ್ಲಿ ಅಕ್ರಮ ಮದ್ಯ ಸಾಗಾಟ ತಡೆಗಟ್ಟಲು ಅಧಿಕಾರಿಗಳು ನಡೆಸಿದ ಈ ಕಾರ್ಯಾಚರಣೆ ಗಮನ ಸೆಳೆದಿದೆ.



