*ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಗ್ರ ಸಿದ್ಧತೆ ಕೈಗೊಳ್ಳಿ: ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಮಾ.15) ನಡೆದ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೆಳಗಾವಿ 518, ಚಿಕ್ಕೋಡಿ 601 ಒಟ್ಟು 1119 ಪ್ರೌಡ ಶಾಲೆಗಳಿದ್ದು, ಪರೀಕ್ಷಾ ಕೇಂದ್ರಗಳ ಸಂಖ್ಯೆ 227 ಕೇಂದ್ರಗಳಿವೆ. ಬೆಳಗಾವಿ 34863 ಹಾಗೂ ಚಿಕ್ಕೋಡಿ 46539 ಒಟ್ಟು 81402 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆ ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ ಸಿಬ್ಬಂದಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಪರೀಕ್ಷೆ ಯಶಸ್ವಿ ಗೊಳಿಸುವ ಸಂಪೂರ್ಣ ಜವಾಬ್ದಾರಿ ನಿಯೋಜಿತ ಸಿಬ್ಬಂದಿಗಳ ಮೇಲಿದೆ. ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಚಲನೆ ಕುರಿತು ನಿರಂತರ ನಿಗಾ ವಹಿಸಬೇಕು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ ತಾಲೂಕಾ ಹಂತದಲ್ಲಿ ವೆಬ್ ಕಾಸ್ಟಿಂಗ್ ತಂತ್ರಜ್ಞರನ್ನು ನೇಮಿಸಲಾಗಿದೆ.
ಜಿಲ್ಲೆಯಲ್ಲಿ ಸೂಕ್ಷ್ಮ ಅತೀ ಸೂಕ್ಷ್ಮ ಪರೀಕ್ಷೆ ಕೇಂದ್ರಗಳನ್ನು ವಿಂಗಡನೆ ಮಾಡಲಾಗಿದೆ ಅದರಲ್ಲಿ ಬೆಳಗಾವಿಯಲ್ಲಿ 5 ಚಿಕ್ಕೋಡಿಯಲ್ಲಿ 5 ಕೇಂದ್ರಗಳಿವೆ.
ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ ನಿಗಾವಹಿಸಿ
ಸೂಕ್ಷ್ಮ ಪರೀಕ್ಷೆ ಕೇಂದ್ರಗಳ ನಿಯೋಜಿತ ಸಿಬ್ಬಂದಿಗಳ ನಿರಂತರ ಗಮನ ಹರಿಸಬೇಕು. ಸಿಸಿಟಿವಿ ಕಳ್ಳತನ, ವಾದವಿವಾದ ಸೇರಿದಂತೆ ಕಳೆದ ವರ್ಷ ಸಣ್ಣ-ಪುಟ್ಟ ಗಲಾಟೆಯಾಗಿರುವ 25 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಪರೀಕ್ಷಾ ಕರ್ತವ್ಯ ನಿರ್ವಹಣೆಗೆ ನಿಯೋಜಿತಗೊಂಡ ಮುಖ್ಯ ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಎಂತಹಾ ಕಠಿಣ ಪರಿಸ್ಥಿತಿಯಲ್ಲೂ ಜಾಣಿಯಿಂದ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ಅಧಿಕಾರಿಗಳಿಗೆ ನೀಡಲಾಗುವುದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ವಿಕಲಚೇತನ ವಿದ್ಯಾರ್ಥಿಗಳಿಗೆ ನೆಲ ಮಹಡಿಯಲ್ಲಿ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರದ ಆದೇಶವಿದೆ. ಅದರಂತೆ ವಿಕಲಚೇತನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವಂತೆ ಮುಂಚಿತವಾಗಿ ನೋಡಿಕೊಂಡು ವ್ಯವಸ್ಥೆ ಕಲ್ಪಿಸಬೇಕು.
ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ ಅಗತ್ಯ
ಪರೀಕ್ಷೆ ಕೇಂದ್ರಗಳಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪುವಂತೆ ಸಾರಿಗೆ ಸಂಸ್ಥೆಯಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು. ಮುಂಚಿತವಾಗಿಯೇ ಬಸ್ ಸಂಚಾರ ಮಾರ್ಗಗಳನ್ನು ಗುರುತಿಸಬೇಕು. ಆರೋಗ್ಯ ಇಲಾಖೆಯಿಂದ ತುರ್ತು ಸೇವೆ, ಅಗತ್ಯ ಔಷಧಿ ಇರಬೇಕು ನುರಿತ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಸೂಚಿಸಿದರು.
ಎಲ್ಲಾ ತಹಶೀಲ್ದಾರಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿರಂತರ ಪರಿಶೀಲನೆ ನಡೆಸಬೇಕು. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ನಿಗಾ ವಹಿಸಬೇಕು. ಪರೀಕ್ಷಾ ಕೇಂದ್ರಗಳ ಪರಿವೀಕ್ಷಣೆಗೆ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ವಿಶೇಷ ತಂಡ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಮುಂಜಾಗ್ರತಾ ಕ್ರಮ
ಪರೀಕ್ಷಾ ಕೇಂದ್ರದ 200 ಮೀಟರ್ ಪ್ರದೇಶವನ್ನು ನಿಷೇಧಿತ ಘೋಷಣೆ. ಝರಾಕ್ಸ್ ಕೇಂದ್ರಗಳನ್ನು ಮುಚ್ಚಲು ಈಗಾಗಲೇ ಆದೇಶಿಸಲಾಗಿದೆ. 600 ಕ್ಕಿಂತ ಹೆಚ್ಚು ಪರೀಕ್ಷಾರ್ಥಿಗಳನ್ನು ಹೊಂದಿದ ಮತ್ತು ಆಯ್ದ 35 ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗುವುದು. ಪರೀಕ್ಷೆಗಳ ಗೌಪ್ಯತೆ, ಪಾರದರ್ಶಕತೆ ಕಾಪಾಡಲು ಜಾಗೃತ ದಳದ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಶ್ಯಬ್ದ ವಾತಾವರಣ ನಿರ್ಮಿಸಲು ಸೂಚನೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ಬೇಸಿಗೆ ಕಾಲ ಇರುವುದರಿಂದ ಬಿಸಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಕುಡಿಯುವ ನೀರು, ಒಆರ್.ಎಸ್ ಗಳನ್ನು ಕಡ್ಡಾಯವಾಗಿ ಇರಿಸಬೇಕು. ಬಸ್ ಸಂಚಾರದ ಮಾರ್ಗಗಳನ್ನು ಗುರುಸಿತಿ, ನಿಗದಿತ ಸಮಯದಲ್ಲಿ ಬಸ್ ಗಳ ಕಾರ್ಯಾಚರಣೆಗೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಪರೀಕ್ಷೆಯ ಸಂದರ್ಭದಲ್ಲಿ ಕೆಲವು ಊರುಗಳಲ್ಲಿ ಜಾತ್ರೆ, ಖಾಸಗಿ ಕಾರ್ಯಕ್ರಮಗಳು ಇರುವ ಸಾಧ್ಯತೆಗಳಿವೆ. ಅಂತಹವುಗಳು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ ಯಾವುದೇ ಸ್ಪೀಕರ್, ಶಬ್ದಗಳು ಕೇಳಿ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲ ಇಲಾಖೆಗಳ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸುಗಮವಾಗಿ ನಡೆಸಲು ಭಯಮುಕ್ತ ಪರೀಕ್ಷಾ ವಾತಾವರಣ ನಿರ್ಮಾಣಕ್ಕೆ ಅಧಿಕಾರಿ, ಸಿಬ್ಬಂದಿಗಳು ಶ್ರಮಿಸಬೇಕು ಎಂದು ಜಿ.ಪಂ ಸಿಇಓ ರಾಹುಲ್ ಶಿಂಧೆ ಅವರು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಡಿಪಿಐ ಅಲಾವತಿ ಹಿರೇಮಠ, ಚಿಕ್ಕೋಡಿ ಡಿಡಿಪಿಐ ಸೀತಾರಾಮು, ಸಹ ನಿರ್ದೇಶಕರಾದ ಸಕರೆಪ್ಪಗೌಡ ಬಿರಾದರ, ಡಯಟ್ ಪ್ರಾಂಶುಪಾಲರರಾದ ಬಸವರಾಜ ನಲತವಾಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದ ಸೇರಿದಂತೆ ಎಲ್ಲ ಕ್ಷೇತ್ರಗಳ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.