ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ದೇಶದಲ್ಲಿ 8 ಕೋಟಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ತಪ್ಪಿನಿಂದಾಗಿ 560 ಜನ ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಕೊರೊನಾ ಲಾಕ್ ಡೌನ್ ನಿಂದಾಗಿ ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ತೊಂದರೆಯಾಗಿದೆ. ರೈತರು ಮತ್ತು ರೈತ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಜನರ ಬಳಿ ಹಣ ಇದ್ದರೆ ಖರೀದಿ ಮಾಡುವ ಶಕ್ತಿ ಬರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ಬರುತ್ತದೆ. ಆದರೆ ಜನರ ಬಳಿ ಹಣ ಇಲ್ಲದೇ ಬೇಡಿಕೆ ಕುಸಿತ ಕಂಡಿದೆ ಎಂದರು.
ಲಾಕ್ ಡೌನ್ ಗೂ ಮೊದಲು 13 ಸಾವಿರ ಪ್ಯಾಸೆಂಜರ್ ರೈಲು ದೇಶದಲ್ಲಿ ಓಡಾಟ ಮಾಡುತ್ತಿದ್ದವು. 2.30 ಕೋಟಿ ಜನರು ದಿನವೂ ಪ್ರಯಾಣಿಸುತ್ತಿದ್ದರು. ಲಾಕ್ ಡೌನ್ ಗೂ ಮೊದಲು ಪ್ಯಾಸೆಂಜರ್ ಟ್ರೈನ್ ನಲ್ಲಿ ನಾಲ್ಕು ದಿನದಲ್ಲಿ ವಲಸೆ ಕಾರ್ಮಿಕರನ್ನು ಅವರ ಸ್ಥಳಗಳಿಗೆ ಕಳುಹಿಸಿಕೊಡಬಹುದಿತ್ತು. ಆದರೆ ಕೇಂದ್ರ ಸರ್ಕಾರ ಹಾಗೆ ಮಾಡಿಲ್ಲ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿದ್ದರೆ ರಸ್ತೆಗಳಲ್ಲಿ ಸಾವು, ಹೆರಿಗೆ ಆಗುವುದನ್ನು ತಪ್ಪಿಸಬಹುದಿತ್ತು. ರೈಲ್ವೆ ಹಳಿಗಳ ಮೇಲೆ ಮಲಗಿ ಕಾರ್ಮಿಕರು ಸಾಯುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ತಪ್ಪಿನಿಂದಾಗಿ 560 ಜನ ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ವಾರ್ ಟೈಮ್ನಲ್ಲೂ ಇಂತಹ ಕಷ್ಟ ಆಗಿರಲಿಲ್ಲ. ಕೇಂದ್ರ ಯಾವುದೇ ಯೋಜನೆ ಇಲ್ಲದೇ ಲಾಕ್ ಡೌನ್ ಮಾಡಿದೆ. 20 ಲಕ್ಷ ಕೋಟಿ ಶೇಕಡಾ 10 ಜಿಡಿಪಿ ಹಣ ಪ್ಯಾಕೇಜ್ ಘೋಷಣೆ ಮಾಡಿದೀವಿ ಅಂತ ಹೇಳಿದರು. 1.70 ಲಕ್ಷ ಕೋಟಿ ರೂಪಾಯಿ ಹಣ ಬಂದಿದೆ. ಬರಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮೂರು ತಿಂಗಳ ಬಳಿಕ ಕಂತು ಕಟ್ಟಿ ಅಂದಿದ್ದಾರೆ. ಕೆಲಸ ಇಲ್ಲದೇ ಮೂರು ತಿಂಗಳ ಬಳಿಕ ಹೇಗೆ ಕಂತು ಕಟ್ಟಲು ಸಾಧ್ಯ? ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ