ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಭವಾನಿಪುರ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಗೆಲುವು ಸಾಧಿಸಿದ್ದು, ಸಿಎಂ ಕುರ್ಚಿ ಭದ್ರಪಡಿಸಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್ ವಿರುದ್ಧ 58 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮಮತಾ ಬ್ಯಾನರ್ಜಿ ಜಯಭೇರಿ ಬಾರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದರು. ಶಾಸಕ ಸ್ಥಾನ ಗೆಲ್ಲದಿದ್ದರೂ ಪಶ್ಚಿಮ ಬಂಗಾಳ ಸಿಎಂ ಆಗಿದ್ದ ಮಮತಾ ಅವರಿಗೆ 6 ತಿಂಗಳಲ್ಲಿ ಉಪಚುನಾವಣೆಯ ಒಂದು ಸ್ಥಾನದಲ್ಲಿ ಗೆದ್ದು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭವಾನಿಪುರ ಉಪಚುನವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಭವಾನಿಪುರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿರುವ ದೀದಿ, ಎಲ್ಲರಿಗೂ ಧನ್ಯವಾದಗಳು ಸಹೋದರ, ಸಹೋದರಿ, ತಾಯಂದಿರು ಭಾರತದ ಎಲ್ಲರಿಗೂ ಧನ್ಯವಾದಗಳು. ವಿಶೇಷವಾಗಿ ಭವಾನಿಪುರದ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಕ್ಕೆ ಇಲ್ಲಿನ ಜನರಿಗೆ ನಾನು ಚಿರಋಣಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದಾಗಿನಿಂದ ಕೇಂದ್ರ ಸರ್ಕಾರ ನನ್ನನ್ನು ಅಧಿಕಾರದಿಂದ ತೆಗೆದುಹಾಕಲು ಸಂಚು ರೂಪಿಸಿತು. ಚುನಾವಣೆಗೆ ಸ್ಪರ್ಧಿಸಿದಂತೆ ನನ್ನ ಕಾಲುಗಳಿಗೆ ಗಾಯವಾಯಿತು. ಆದರೂ ನನ್ನ ಹೋರಾಟ ನಿಲ್ಲಲಿಲ್ಲ, ಇಂದು ಭವಾನಿಪುರದಲ್ಲಿ ಗೆಲುವು ಸಾಧಿಸಿರುವುದು ಸಂತಸವಾಗಿದೆ. 6 ತಿಂಗಳಲ್ಲಿ ಚುನಾವಣೆ ನಡೆಸಿದ್ದ ಚುನಾವಣೆ ಆಯೋಗಕ್ಕೆ ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ ವಿಶೇಷ ಅನುದಾನ ನೀಡಲು ಸಿದ್ಧ: ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ