ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೌಟುಂಬಿಕ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜೋಡಿ ಕೊಲೆಗೈದಿದ್ದ ವ್ಯಕ್ತಿಗೆ ಇಲ್ಲಿನ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬೈಲಹೊಂಗಲ ತಾಲೂಕು ದೊಡವಾಡದ ಮಹಾದೇವ ಯಲ್ಲಪ್ಪ ಹಾಲನ್ನವರ ಶಿಕ್ಷೆಗೆ ಗುರಿಯಾದವ. 2013ರ ಸೆ.19ರಂದು ಅರ್ಜುನ ಹಾಲನ್ನವರ ಮತ್ತು ಸಿದ್ದಪ್ಪ ಹಾಲನ್ನವರ ಅವರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಿದ್ದಪ್ಪ ಅವರ ಮಗ ಪರಮೇಶಿ ಮೇಲೂ ಹಲ್ಲೆ ನಡೆದು ಗಂಭೀರ ಗಾಯಗೊಂಡಿದ್ದರು.
ಆರೋಪಿತನ ತಂದೆ ಯಲ್ಲಪ್ಪ ಹಾಲನ್ನವರ ಕುಟುಂಬದ 3 ಎಕರೆ ಜಮೀನು ಖರೀದಿಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಅವರು ಮೃತಪಟ್ಟ ನಂತರ ಆರೋಪಿ ಮಹಾದೇವ ಅದನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ. ಆದರೆ ಅರ್ಜುನ ಹಾಗೂ ಸಿದ್ದಪ್ಪ ಅದರಲ್ಲಿ ತಮಗೂ ಪಾಲು ಕೇಳಿದ್ದಕ್ಕೆ ಮಹಾದೇವ ಸಿಟ್ಟಿಗೆದ್ದಿದ್ದ.
ಸೆ.19ರಂದು ಆರೋಪಿಯ ತಾಯಿ ರುದ್ರವ್ವ ಅವರ ಹೆಸರಿನಲ್ಲಿರುವ ಜಮೀನಿನ ಮೂಲಕ ಸಿದ್ದಪ್ಪ ಅರ್ಜುನ ಹಾಗೂ ಪರಮೇಶಿ ಚಕ್ಕಡಿಯಲ್ಲಿ ಸಾಗುತ್ತಿದ್ದ ವೇಳೆ ಆಕ್ಷೇಪಿಸಿದ್ದ ಆರೋಪಿ ಕುಡುಗೋಲಿನಿಂದ ಹಲ್ಲೆ ಮಾಡಿ ಇಬ್ಬರನ್ನು ಕೊಲೆಗೈದಿದ್ದಲ್ಲದೆ ಪ್ರಕರಣದ ಸಾಕ್ಷಿದಾರ ಮಹಾದೇವ ಸಂಗೊಳ್ಳಿ ಎಂಬುವವರ ಹೊಲದ ಮೂಲಕ ಓಡಿಹೋಗುತ್ತಿದ್ದ ಪರಮೇಶಿಯನ್ನೂ ಅಟ್ಟಾಡಿಸಿಕೊಂಡು ಹೋಗಿ ಮಾರಣಾಂತಿಕ ಹಲ್ಲೆಗೈದಿದ್ದ.
ಈ ಕುರಿತು ತನಿಖೆ ಕೈಗೊಂಡು ಸಿಪಿಐಗಳಾದ ಎಸ್.ಆರ್. ಕಾಂಬಳೆ ಮತ್ತು ಸಂಗನಗೌಡ ಅವರು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೊಂಡ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ ಗೋಪಾಲಾಚಾರ್ಯ ಶಿರೋಳ ಅವರು ವಾದ- ಪ್ರತಿವಾದ ಆಲಿಸಿದ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮಹಾದೇವನಿಗೆ IPC ಕಲಂ 302 ರಡಿ ಜೀವಾವಧಿ ಶಿಕ್ಷೆ, 2 ಲಕ್ಷ ರೂ. ದಂಡ, 307 ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ಕಲಂ 201ರ ಅಡಿಯ ಅಪರಾಧಕ್ಕೆ 5 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ.
ಸರಕಾರದ ಪರ ಅಭಿಯೋಜಕ ಬಿ.ಎಸ್. ಕೂಗುನವರ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ