*ನಾಳೆಯಿಂದ ಸಕ್ಕರೆ ನಾಡಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಉಚಿತ ಬಸ್ ವ್ಯವಸ್ಥೆ*
ಪ್ರಗತಿವಾಹಿನಿ ಸುದ್ದಿ: ನಾಳೆಯಿಂದ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಡಿ.20ರಿಂದ 22ರವರೆಗೆ ಮೂರು ದಿನಗಳಕಲಾ ಮಂಡ್ಯದಲ್ಲಿ ನುಡಿ ಜಾತ್ರೆ ನಡೆಯಲಿದ್ದು, ಅಕ್ಷರ ಜಾತ್ರೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಡ್ಯ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಮಂಡ್ಯ ಹೊರವಲಯದ ಶ್ರೀನಿವಾಸ್ ಪುರದ ಬಳಿ ಸುಮಾರು 60 ಎಕರೆ ಪ್ರದೇಶದಲ್ಲಿ ನುಡಿಹಬ್ಬವನ್ನ ಆಚರಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.
ಕೆಆರ್ಎಸ್ ಡ್ಯಾಂ ಮಾದರಿ ಪ್ರವೇಶದ್ವಾರ:
ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಕೆ.ಆರ್.ಎಸ್ ಅಣೆಕಟ್ಟೆ ಮಾದರಿಯ ಆಕರ್ಷಕ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನ ವೇದಿಕೆಯ ಈ ಪ್ರವೇಶ ದ್ವಾರದ ವಿನ್ಯಾಸವು 40 ಅಡಿ ಎತ್ತರ ಮತ್ತು ಬರೋಬ್ಬರಿ 300 ಅಡಿ ಅಗಲ ಇದೆ.
ಉಚಿತ ಸಾರಿಗೆ:
ಸಾಹಿತ್ಯ ಜಾತ್ರೆಗೆ ಬರುವವರಿಗಾಗಿ ಮಂಡ್ಯದಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಮ್ಮೇಳನಕ್ಕೆ ಉಚಿತ ಬಸ್ ಸೇವೆ ಇರಲಿದೆ.
ಸರ್ವಿಸ್ ರಸ್ತೆಗಳಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ. ಚಿಕ್ಕಮಂಡ್ಯದಿಂದ ಹನಕೆರೆವರೆಗಿನ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ.
ಮದ್ದೂರು ಮತ್ತು ಶ್ರೀರಂಗಪಟ್ಟಣ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ಎಕ್ಸ್ ಪ್ರೆಸ್ ವೇನಲ್ಲಿ ಚಲಿಸುವುದು. ನಿರ್ಬಂಧಿತ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳಿಗೆ ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.
ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗಿಯಾಗಬೇಕು ಎಂಬ ಕಾರಣಕ್ಕೆ ಮಂಡ್ಯದ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಡಿ.20, 21 ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ