
ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮೊಬೈ ಲ್ ಬಳಸದಂತೆ ಮಗನಿಗೆ ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನೇ ಮಗ ಹತ್ಯೆ ಮಾಡಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ವಿದ್ಯಾನಗರದಲ್ಲಿ ಜುಲೈ 29ರಂದು ಶ್ರೀಲಕ್ಷ್ಮಿ(46) ಎಂಬ ಮಹಿಳೆಯೊಬ್ಬರ ಬರ್ಬರ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಮಗನೇ ತಾಯಿಯನ್ನು ಹತ್ಯೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಘಟನೆ ಬಳಿಕ ಮಗ ನಾಪತ್ತೆಯಾಗಿದ್ದ. ಮಗನ ಮೇಲೆ ಅನುಮಾನಗೊಂಡ ಪೊಲೀಸರು ನಾಪತ್ತೆಯಾದ ಮಗನನ್ನು ಪತ್ತೆಹಚ್ಚಿ, ವಿಚಾರಣೆ ಮಾಡಿದಾಗ ಮನೆಯಲ್ಲಿ ಮೊಬೈಲ್ ಬಳಸದಂತೆ ತಾಯಿ ಹೇಳಿದ್ದಳು. ಅಲ್ಲದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದಳು. ಇದರಿಂದ ಆಕ್ರೋಶಗೊಂಡು ಚಕ್ಕುಲಿ ಹೊಳ್ಳಿನಿಂದ ತಾಯಿಯ ತಲೆಯನ್ನು ಸೀಳಿ ಹತ್ಯೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಆರೋಪಿ ಮಗನ ಹೇಳಿಕೆ ಪಡೆದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚಕ್ಕುಲಿ ಹೊಳ್ಳು ಸೇರಿದಂತೆ ಮೊಬೈಲ್ ಹಾಗೂ ಬೈಕ್ ಅನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.