ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಸಂಬಂಧಿಸಿದಂತೆ. ಶಂಕಿತ ಆರೋಪಿಯನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡ ಬಂದ ಆಟೋ ಚಾಲಕ ಸ್ವತಃ ತಾನೇ ಪೊಲೀಸರ ಎದುರು ಹಾಜರಾಗಿದ್ದಾನೆ.
ಶಂಕಿತ ಆರೋಪಿಯ ಫೋಟೋ ಹಾಗೂ ಆತ ಬಂದಿದ್ದ ಆಟೋದ ಫೋಟೋಗಳನ್ನು ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಆಟೋ ಚಾಲಕ ಪೊಲೀಸ್ ಠಾಣೆಗೆ ಬಂದು ಸ್ವತಃ ಹೇಳಿಕೆ ನೀಡಿದ್ದಾನೆ. ಖಾಸಗಿ ಬಸ್ಸಿನಲ್ಲಿ ಬಂದ ಮಧ್ಯ ವಯಸ್ಕ ಶಂಕಿತ ವ್ಯಕ್ತಿ ಬಳಿಯಲ್ಲಿ ಎರಡು ಬ್ಯಾಗ್ ಇತ್ತು. ಕೆಂಜಾರಿನಲ್ಲಿ ಇಳಿದ ಆತ ಒಂದು ಬ್ಯಾಗನ್ನು ಸೆಲೂನ್ ಅಂಗಡಿ ಬಳಿ ಇರಿಸಿದ್ದ. ಈ ವೇಳೆ ಮಾಲೀಕರು ಆ ಬ್ಯಾಗನ್ನು ಹೊರಗಡೆ ಇಡು ಎಂದು ಹೇಳಿದ್ದರು. ಹೀಗಾಗಿ ಬ್ಯಾಗನ್ನು ಹೊರಗಡೆ ಇಟ್ಟು ಆತ ರಿಕ್ಷಾ ಏರಿ ವಿಮಾನ ನಿಲ್ದಾಣದ ಕಡೆ ಪ್ರಯಾಣಿಸಿದ್ದ.
ಬೆಳಗ್ಗೆ 8:50ಕ್ಕೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಹೊರ ಭಾಗದಲ್ಲಿ ಬ್ಯಾಗ್ ಇರಿಸಿ ಮತ್ತೆ ರಿಕ್ಷಾ ಏರಿದ್ದಾನೆ. ಬಜ್ಪೆ ವಿಮಾನ ನಿಲ್ದಾಣದಿಂದ ಮತ್ತೆ ಆಟೋದಲ್ಲಿ ಪ್ರಯಾಣ ಬೆಳೆಸಿದವ ನನ್ನೊಂದಿಗೆ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾನೆ. ಬಳಿಕ ಕೆಂಜಾರಿಗೆ ತೆರಳಿ ಅಂಗಡಿಯಲ್ಲಿ ಇಟ್ಟಿದ್ದ ಬ್ಯಾಗನ್ನು ಎತ್ತುಕೊಂಡಿದ್ದಾನೆ. ಪ್ರಯಾಣದ ಅವಧಿಯಲ್ಲಿ ಯಾವುದೇ ಆತಂಕ ತೋರಿಸಿಕೊಂಡಿಲ್ಲ. ಆರಾಮಾಗಿ ಮಾತನಾಡುತ್ತಾ ಪಂಪ್‍ವೆಲ್ ತಲುಪಿ 400 ರೂ. ಬಾಡಿಗೆ ಕೊಟ್ಟು ಇಳಿದಿದ್ದಾನೆ ಎಂದು ಆಟೋ ಚಾಲಕ ತಿಳಿಸಿದ್ದಾನೆ.
ಆಟೋ ಚಾಲಕನ ಮಾಹಿತಿ ಮೇರೆಗೆ ಮೂರು ವಿಶೇಷ ತಂಡಗಳನ್ನು ರಚಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಪ್‍ಟಾಪ್ ಬ್ಯಾಗ್‍ನಲ್ಲಿ ಸಜೀವ ಬಾಂಬ್ ಒಂದು ಪತ್ತೆಯಾಗಿ ಆತಂಕ ಹುಟ್ಟಿಸಿತ್ತು. ಆದರೆ ಅದನ್ನು ಗಮನಿಸಿದ್ದ ಸಿಬ್ಬಂದಿಗಳು ಬಾಂಬ್ ಸ್ಕ್ವಾಡ್ ಮೂಲಕ ಕೆಂಜಾರು ಮೈದಾನದಕ್ಕೆ ತೆಗೆದುಕೊಂಡು ಸ್ಫೋಟಿಸಿ, ನಿಷ್ಕ್ರಿಯಗೊಳಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ