ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಆದಿತ್ಯರಾವ್ ವಿರುದ್ಧ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಆರೋಪಿ ಆದಿತ್ಯರಾವ್ ವಿರುದ್ಧ ಸ್ಥಳೀಯ ಪೋಲಿಸರ ವಿಶೇಷ ತನಿಖಾ ತಂಡ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.
ಚಾರ್ಜ್ಶೀಟ್ನಲ್ಲಿ ಆರೋಪಿ ಇಟ್ಟಿದ್ದ ಬ್ಯಾಗ್ ನಲ್ಲಿ ಇದ್ದದ್ದು ನಿಜವಾದ ಸ್ಫೋಟಕವಾಗಿದೆ. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆದಿತ್ಯರಾವ್ ಬಾಂಬ್ ಇಟ್ಟಿದ್ದ ಎಂದು ತಿಳಿಸಲಾಗಿದೆ.
ಅಲ್ಲದೆ ಅಮೋನಿಯಂ ನೈಟ್ರೇಟ್, ಸ್ಫೋಟದ ತೀವ್ರತೆ ಹೆಚ್ಚಿಸಲು ಕಬ್ಬಿಣದ ಮೊಳೆ ಅಳವಡಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಒಂದು ವೈಯರ್ ಸಂಪರ್ಕಿಸದೆ ಆರೋಪಿ ಹಾಗೆಯೇ ಬಿಟ್ಟಿದ್ದ. ಇದು ನಿಜವಾದ ಸ್ಫೋಟಕ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಸಾಬೀತಾಗಿದೆ. ಆರೋಪಿ ವಿರುದ್ಧ ಯು.ಎ.ಪಿ.ಎ ಅಡಿ ಪ್ರಕರಣ ದಾಖಲಿಸಿ ಈ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
2020ರ ಜನವರಿ 20ರಂದು ಮಂಗಳೂರು ಏರ್ ಪೋರ್ಟ್ನಲ್ಲಿ ಬಾಂಬ್ ಪತ್ತೆಯಾಗಿದ್ದು, ಈ ವಿಚಾರ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬೆನ್ನಲ್ಲೆ ಆರೋಪಿ ಆದಿತ್ಯರಾವ್ ನೇರವಾಗಿ ಬೆಂಗಳೂರಿಗೆ ಬಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರ ಕಚೇರಿಗೆ ತೆರಳಿ ಶರಣಾಗಿದ್ದ. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಾನೇ ಬಾಂಬ್ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ