ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಇಂದಿನಿಂದ ಮ್ಯಾಜಿಸ್ಟ್ರೇಟ್ ತನಿಖೆ ಆರಂಭಗೊಂಡಿದೆ.
ಮಂಗಳೂರಿನಲ್ಲಿ ಡಿಸೆಂಬರ್ 19ರಂದು ನಡೆದ ಗೋಲಿಬಾರ್ ಪ್ರಕರಣ ಕುರಿತು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ವಿಚಾರಣೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ತನಿಖಾಧಿಕಾರಿ ಜಗದೀಶ್, ವಿಚಾರಣೆ ವೇಳೆ ಪೊಲೀಸರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗಿದೆ. ಪ್ರತ್ಯಕ್ಷದರ್ಶಿಗಳಿಗೆ ಸಾಕ್ಷ್ಯ ಹೇಳಲು ಅವಕಾಶ ನೀಡಲಾಗಿತ್ತು. ಒಟ್ಟು 14 ಜನರು ಸಾಕ್ಷಿ ಹೇಳಲು ಆಗಮಿಸಿದ್ದು, ಅದರಲ್ಲಿ ಹಲವರು ಪ್ರತ್ಯಕ್ಷ ದರ್ಶಿಗಳಿದ್ದರು. ಲಿಖಿತ ರೂಪದಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಮುಂದೆ ಮೃತರ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ