Latest

ವೈದ್ಯರೇ ರಕ್ತದಾನ ಮಾಡಿ ಕಿಡ್ನಿ ಕಸಿ ಮಾಡಿದರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲಾಕ್‌ಡೌನ್ ಸಮಯದಲ್ಲಿ ವೈದ್ಯಕೀಯ ಮತ್ತು ಸಾರಿಗೆ ಸಂಬಂಧಿತ ಅಡೆತಡೆಗಳನ್ನು ನಿವಾರಿಸಿಕೊಂಡು ಒಂದಾಗಿ ಸೇರಿ ಅಪರೂಪದ ಮೂತ್ರಪಿಂಡ ಕಸಿ  ಚಿಕಿತ್ಸೆ ನಡೆಸುವಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ನಡುವೆ,  ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ೪೩ ವರ್ಷ ವಯಸ್ಸಿನ ರೋಗಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ  ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ರೋಗಿಗೆ ಬಹು ಸಂಕೀರ್ಣ ತೊಂದರೆಗಳು ಕಾಡಿದ್ದು, ಶೀಘ್ರವಾಗಿ ಮೂತ್ರಪಿಂಡ ಕಸಿ ಕ್ರಮದ ಅಗತ್ಯವಿತ್ತು. ಜೊತೆಗೆ ಶಸ್ತ್ರಕ್ರಿಯೆಗೆ ರಕ್ತದ ಅಗತ್ಯವೂ ಇತ್ತು.
ಅಲ್ಪ ಸಮಯದಲ್ಲಿಯೇ ಶಸ್ತ್ರಕ್ರಿಯೆಯನ್ನು ಆಯೋಜಿಸಿದ್ದರಿಂದ, ರಕ್ತವನ್ನು ಸಂಗ್ರಹಿಸುವುದಕ್ಕೆ ಸಮಯ ಹಿಡಿಯಬಹುದಿತ್ತು. ಇದಕ್ಕಾಗಿ ಮಣಿಪಾಲ್ ಆಸ್ಪತ್ರೆಯ ವೈದ್ಯರೇ ಮುಂದೆ ಬಂದು ರಕ್ತದಾನ ಮಾಡಿ, ಯಾವುದೇ ಅಡ್ಡಿ ಆತಂಕಗಳಿಲ್ಲದೇ ಶಸ್ತ್ರಚಿಕಿತ್ಸೆ ನಡೆಸಲು ನೆರವಾದರು.

ಈ ಕಾರ್ಯದಲ್ಲಿ ಡಾ. ರವಿ ಜಂಗಮಣಿ, ಡಾ. ವಿಶ್ವನಾಥ್ ಮತ್ತು ಸೌರಭ್ ಕಿಸ್ತೆ ಒಂದಾಗಿ ಮುಂದೆ ಬಂದಿದ್ದರು. ಮೂತ್ರಪಿಂಡ ತಜ್ಞ ಡಾ. ರವಿ ಜಂಗಮಣಿ ಅವರೊಂದಿಗೆ ಮೂತ್ರರೋಗ ತಜ್ಞರಾದ ಡಾ. ದೀಪಕ್ ದುಬೇ, ಡಾ. ಶಿವಶಂಕರ್ ಆರ್. ಮತ್ತು ಡಾ. ಸೋಮಣ್ಣ, ಸಿಟಿವಿಎಸ್ ಶಸ್ತ್ರಕ್ರಿಯಾ ತಜ್ಞ ಡಾ. ದೇವಾನಂದ ಎನ್.ಎಸ್. ಅವರನ್ನು ಒಳಗೊಂಡ ತಂಡ, ಜೊತೆಗೆ ಅರಿವಳಿಕೆ ತಜ್ಞ ಡಾ. ನವನೀತನ್ ಅವರೊಂದಿಗಿನ ತಂಡ ಈ ಮೂತ್ರಪಿಂಡ ಕಸಿ ಕ್ರಮದಲ್ಲಿ ತೊಡಗಿಸಿಕೊಂಡಿದ್ದರು.

ಕೋಲ್ಕತಾ ಮೂಲದ ರೋಗಿ ಕುಟುಂಬ ಸಂಬಂಧಿತ ಮೂತ್ರಪಿಂಡ ರೋಗ – ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್(ಎಡಿಪಿಕೆಡಿ)ನಿಂದ ಬಳಲಿದ್ದು, ಇದು ಮೂತ್ರಪಿಂಡ ವೈಫಲ್ಯಕ್ಕೆ ದಾರಿಮಾಡಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಎಡಿಪಿಕೆಡಿಯಿಂದಾಗಿ ಅವರಿಗೆ ದೊಡ್ಡ ಗಾತ್ರದ ಮೂತ್ರಪಿಂಡಗಳಿದ್ದು ಕಸಿ ಕ್ರಮದಲ್ಲಿ ಹೊಸ ಮೂತ್ರ ಪಿಂಡ ಜೋಡಿಸಲು ಸ್ಥಳಾವಕಾಶ ಇರಲಿಲ್ಲ.
ನನ್ನ ಕಲ್ಪನೆಯಲ್ಲಿ ಇದು ಅತ್ಯಂತ ಹೆಚ್ಚಿನ ತಾಂತ್ರಿಕ ಸವಾಲಿನ ಮೂತ್ರಪಿಂಡ ಕಸಿ ಕ್ರಮಗಳಲ್ಲಿ ಒಂದಾಗಿತ್ತು. ಈ ಸವಾಲಿನೊಂದಿಗೆ ನಮ್ಮ ಸುತ್ತಲೂ ಕೋವಿಡ್ ೧೯ ಸೋಂಕಿನ ಆತಂಕವೂ ಹರಡಿತ್ತು. ರೋಗಿಯ ರಕ್ತನಾಳಗಳು ರೋಗಗ್ರಸ್ಥವಾಗಿದ್ದು, ಕೃತಕ ಕಸಿ ಕ್ರಮ ಏಕೈಕ ಆಯ್ಕೆಯಾಗಿತ್ತು. ಇಲ್ಲಿ ಬಳಸಲಾದ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ವಿನೂತನ ಕ್ರಮವಾಗಿತ್ತು. ವೈದ್ಯರ ಹಲವು ತಂಡಗಳ ನಡುವಿನ ದೃಢನಿಶ್ಚಯದ ಮತ್ತು ದಣಿವಿಲ್ಲದ ಪ್ರಯತ್ನದಿಂದ ಈ ಶಸ್ತ್ರಕ್ರಿಯೆ ಮತ್ತು ಶಸ್ತ್ರಕ್ರಿಯೆ ನಂತರ ನಿರ್ವಹಣೆ ಸಾಧ್ಯವಾಗಿತ್ತು ಎಂದು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಮೂತ್ರರೋಗ ಶಾಸ್ತ್ರ, ರೋಬೋಟಿಕ್ ಶಸ್ತ್ರಕ್ರಿಯೆ ಮತ್ತು ಮೂತ್ರಪಿಂಡ ಕಸಿ ಸಲಹಾ ತಜ್ಞ ಮತ್ತು ವಿಭಾಗೀಯ ಮುಖ್ಯಸ್ಥರಾದ ಡಾ. ದೀಪಕ್ ದುಬೆ ಹೇಳಿದರು.
ಜೊತೆಗೆ ಅವರ ರಕ್ತನಾಳಗಳು ಹಾಳಾಗಿದ್ದು, ಕೆಳ ಮಹಾಪಧಮನಿ(ಲೋವರ್ ಅಯೋರ್ಟ) ಕಿರಿದಾಗಿದ್ದು ದೇಹದ ಕೆಳಭಾಗಕ್ಕೆ ರಕ್ರ ಪೂರೈಕೆ ಕಳಪೆ ಮಟ್ಟದಲ್ಲಿದ್ದು, ಮೂತ್ರಪಿಂಡ ಕಸಿ ಕಷ್ಟಕರವಾಗಿತ್ತು. ಇವೆಲ್ಲದರ ಜೊತೆಗೆ ತೀವ್ರ ರಕ್ತಹೀನತೆಯಿಂದ ಅವರ ಸ್ಥಿತಿ ಹದಗೆಡುತ್ತಿತ್ತು. ಜೊತೆಗೆ ಹೃದಯದ ಕಾರ್ಯ ಕಳಪೆಗೊಂಡಿತ್ತು. ವಾರಕ್ಕೆ ನಾಲ್ಕು ಬಾರಿ ಡಯಾಲಿಸಿಸ್ ಮಾಡಿಕೊಳ್ಳಬೇಕಾದ ಅಗತ್ಯ ಬಂದಿತ್ತು. ಇದರಿಂದ ಲಾಕ್‌ಡೌನ್ ಅವಧಿಯಲ್ಲಿ ರೋಗಿಯ ಮೇಲೆ ಬೃಹತ್ ಆರ್ಥಿಕ ಒತ್ತಡ ಕೂಡ ಉಂಟಾಗಿತ್ತು.
ಹೃದಯ, ಎದೆಭಾಗದ ರಕ್ತನಾಳ ಶಸ್ತ್ರಚಿಕಿತ್ಸೆ, ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸೆ -ಸಲಹಾ ತಜ್ಞ ಮತ್ತು ವಿಭಾಗೀಯ ಮುಖ್ಯಸ್ಥರಾದ ಡಾ. ದೇವಾನಂದ ಎನ್. ಎಸ್. ಮಾತನಾಡಿ, ಈ ರೋಗಿ ಅನನ್ಯ ಸವಾಲುಗಳನ್ನು ಒಡ್ಡಿದ್ದರು. ಎರಡೂ ಕಾಲುಗಳಲ್ಲಿ ರಕ್ತದ ಹರಿವು ಕಡಿಮೆ ಇತ್ತು. ಜೊತೆಗೆ ಅವರಿಗೆ ಮೂತ್ರಪಿಂಡ ಕಸಿ ಅಗತ್ಯವಿತ್ತು. ಒಂದ್ನು ಬಿಟ್ಟು ಇನ್ನೊಂದು ಕ್ರಮ ಕೈಗೊಂಡರೆ ಚಿಕಿತ್ಸೆ ಅಪೂರ್ಣವಾಗುತ್ತಿತ್ತು. ನಮ್ಮ ನವೀನತೆ ಮತ್ತು ಸಾಂಘಿಕ ಕಾರ್ಯದಿಂದ, ಅವರಿಗೆ ಅರ್ಹ ಎನಿಸಿದ ಅತ್ಯುತ್ತಮ ಚಿಕಿತ್ಸೆ ನೀಡಲು ನಮಗೆ ಸಾಧ್ಯವಾಗಿತ್ತು. ಇದು ಉತ್ತಮ ಗುಣಮಟ್ಟದ ವೈದ್ಯಕೀಯ ಆರೈಕೆಯಾಗಿತ್ತು ಎಂದರು.
ಮಣಿಪಾಲ್ ಆಸ್ಪತ್ರೆಯ ಚೇರ್‌ಮನ್ ಡಾ. ಸುದರ್ಶನ್ ಬಲ್ಲಾಳ್ ಅವರು ಮಾತನಾಡಿ, ಒಂದೆಡೆ ವೈದ್ಯರು ಕೊರೋನಾ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದರೆ, ಸಹಾನುಭೂತಿ, ದಯೆ ಮತ್ತು ಮಾನವತ್ವ ಪ್ರದರ್ಶಿಸಿ, ತಮ್ಮ ಕರ್ತವ್ಯವನ್ನು ಮೀರಿ ಶ್ರಮಿಸಿ ರೋಗಿಯನ್ನು ಉಳಿಸಿದ ವೈದ್ಯರು ಮತ್ತೊಂದೆಡೆ ನಮ್ಮಲ್ಲಿದ್ದಾರೆ. ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯರ ತಂಡದಿಂದ ಈ ಉದಾತ್ತ ವರ್ತನೆ ವಿಶೇಷವಾಗಿ ಶ್ಲಾಘನೀಯ, ನಮ್ಮ ವೈದ್ಯರ ಈ ವಿನಮ್ಯ ವರ್ತನೆಯ ಬಗ್ಗೆ ನಾವು ನಿಜಕ್ಕೂ ಬಹಳ ಹೆಮ್ಮೆ ಪಡುತ್ತೇವೆ. ಮೂತ್ರಪಿಂಡ ಕಸಿ ಅತ್ಯಂತ ಸಂಕೀರ್ಣ ಶಸ್ತ್ರಕ್ರಿಯೆ, ಆದ್ದರಿಂದ ಇದನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಮೊದಲ ಹಂತದಲ್ಲಿ, ಬದಲಿ ಮೂತ್ರಪಿಂಡ ಅಳವಡಿಸಲು ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಅವರಲ್ಲಿದ್ದ ಬೃಹತ್ ಪಾಲಿಸಿಸ್ಟಿಕ್ ಮೂತ್ರಪಿಂಡಗಳನ್ನು ತೆಗೆಯಲಾಯಿತು. ಎರಡನೇ ಹಂತದಲ್ಲಿ ಕೆಟ್ಟಿದ್ದ ಅವರ ರಕ್ತನಾಳಗಳನ್ನು ಸರಿಪಡಿಸಿ, ಅದರೊಂದಿಗೆ ಮೂತ್ರಪಿಂಡ ಕಸಿ ಕ್ರಮ ನಡೆಸಲಾಯಿತು ಎಂದರು.
ಹಳೆಯ ವಿಮಾನ ನಿಲ್ದಾಣದ ರಸ್ತೆ ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ರೋಗ ಸಲಹಾ ತಜ್ಞ ಡಾ. ರವಿ ಜಂಗಮಣಿ ಮಾತನಾಡಿ, ಇದು ಅತ್ಯಂತ ಗಂಭೀರ ಸ್ಥಿತಿ. ಸ್ಥಳಾವಕಾಶ ಮಾಡಿಕೊಡಲು ಪೀಡಿತ ಮೂತ್ರಪಿಂಡಗಳನ್ನು ತೆಗೆದು, ರಕ್ತನಾಳಗಳನ್ನು ಸರಿಪಡಿಸಿದ ನಂತರ ಮೂತ್ರಪಿಂಡ ಕಸಿ ನಡೆಸುವುದೇ ಏಕೈಕ ಆಯ್ಕೆಯಾಗಿ ಉಳಿದಿತ್ತು. ಆದರೆ ಶಸ್ತ್ರಕ್ರಿಯೆ ಸಂಕೀರ್ಣ ಮಾತ್ರವಲ್ಲದೇ ಅಪಾಯಕಾರಿಯೂ ಆಗಿತ್ತು. ಕೋರೋನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಾ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಡುವಲ್ಲಿ ನಾವಿದ್ದೇವೆ. ರೋಗಿಗೆ ಚಿಕಿತ್ಸೆ ನೀಡಿ ನೆರವಾಗಲು ನಮ್ಮ ಸಾಮರ್ಥ್ಯಗಳನ್ನು ದಾಟಿ ಹೋಗಬೇಕಾದ ಅಗತ್ಯವಿತ್ತು. ರೋಗದ ಸಂಕೀರ್ಣ ರೀತಿ ಒಡ್ಡಿದಂತಹ ವೈದ್ಯಕೀಯ ಸವಾಲುಗಳ ಜೊತೆಗೆ, ಸಾರಿಗೆ ಸಂಬಂದಿ ಸವಾಲುಗಳನ್ನು ಕೂಡ ನಾವು ಎದುರಿಸುತ್ತಿದ್ದೆವು. ಲಾಕ್‌ಡೌನ್‌ನಿಂದ ರಕ್ತದಾನಿಗಳ ಕೊರತೆ ಕಾಡಿತ್ತು. ಜೊತೆಗೆ ಬ್ಲಡ್‌ಬ್ಯಾಂಕ್‌ಗಳಲ್ಲಿ ರಕ್ತ ಲಭ್ಯವಿರಲಿಲ್ಲ. ರೋಗಿಯ ರಕ್ತದ ಗುಂಪು ಒ+ ಆಗಿದ್ದರೂ, ಅದನ್ನು ಸಂಗ್ರಹಿಸಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವುದು ಕಷ್ಟವಾಗಿತ್ತು ಎಂದರು.
ಅತ್ಯಾಧುನಿಕ ಕೃತಕ ಕಸಿ(ಬ್ಲಡ್ ಚಾನೆಲ್) ಬಳಸಿ ಹಾನಿಗೊಳಗಾಗಿದ್ದ ಅಯೋರ್ಟಾವನ್ನು ಬೈಪಾಸ್ ಮಾಡಿದ್ದೆವು. ಇದರೊಂದಿಗೆ ದೇಹದ ಕೆಳಭಾಗಕ್ಕೆ ರಕ್ತದ ಪೂರೈಕೆಯನ್ನು ಪುನರ್‌ಸ್ಥಾಪಿಸಲಾಗಿತ್ತು. ಕಸಿ ಮಾಡಲಾದ ಮೂತ್ರಪಿಂಡಕ್ಕೆ ಯಶಸ್ವಿಯಾಗಿ ರಕ್ತ ಪೂರೈಕೆಯಾಗುವಂತೆ ಮಾಡಲು ಕೂಡ ಇದೇ ತಂತ್ರವನ್ನು ಬಳಸಿದ್ದೆವು. ಈ ಕೋವಿಡ್ ಸಾಂಕ್ರಾಮಿಕದ ನಡುವೆ ಕೋವಿಡ್ ಮುಕ್ತ ಕಾರಿಡಾರ್ ಉಳಿಸಿಕೊಳ್ಳುವುದರೊಂದಿಗೆ, ಶಸ್ತ್ರಕ್ರಿಯೆ ಪೂರ್ವ, ಶಸ್ತ್ರಕ್ರಿಯೆಗಳ ನಡುವೆ ಮತ್ತು ಶಸ್ತ್ರಕ್ರಿಯೆ ನಂತರ ಆರೈಕೆಗಳಲ್ಲಿ ಸೋಂಕು ತಡೆಯಲು ಎಲ್ಲ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮಣಿಪಾಲ್ ಆಸ್ಪತ್ರೆಯಲ್ಲಿ ನಡೆಸಲಾದ ತನ್ನ ರೀತಿಯ ಮೊದಲ ಮೂತ್ರಪಿಂಡ ಕಸಿ ಕ್ರಮ ಇದಾಗಿತ್ತು. ಪ್ರಸ್ತುತ ರೋಗಿಯ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದರು.
ಮಣಿಪಾಲ್ ಆಸ್ಪತ್ರೆ ಕುರಿತು :-
ಆರೋಗ್ಯ ಶುಶ್ರೂಷೆ ಕ್ಷೇತ್ರದಲ್ಲಿ ಆದ್ಯಪ್ರವರ್ತಕರಾದ ಮಣಿಪಾಲ್ ಆಸ್ಪತ್ರೆ ಭಾರತದಲ್ಲಿ ಅತ್ಯಂತ ದೊಡ್ಡದಾದ ಆಸ್ಪತ್ರೆಗಳ ಜಾಲವಾಗಿದ್ದು ವಾರ್ಷಿಕವಾಗಿ ೨೦ ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕೈಗೆಟುಕುವ ರೀತಿಯಲ್ಲಿ ಮೂರನೇ ಉನ್ನತ ಹಂತದ ಬಹುವಿಶೇಷತೆಯ ಆರೋಗ್ಯ ಶುಶ್ರೂಷೆ ಚೌಕಟ್ಟನ್ನು ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಉದ್ದೇಶವಾಗಿದ್ದು ತನ್ನ ಎಲ್ಲಾ ಬಹುವಿಶೇಷತೆಯ ಪೂರೈಕೆ ಶ್ರೇಣಿಯ ಮೂಲಕ ಈ ಕ್ರಮವನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಜೊತೆಗೆ ಈ ಸೇವೆಯನ್ನು ಗೃಹ ಆರೈಕೆಗೆ ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಪ್ರಮುಖ ನಾಲ್ಕನೇ ಉನ್ನತ ಹಂತದ ಆರೈಕೆಯ ಸೌಲಭ್ಯವನ್ನು ಸಂಸ್ಥೆ ಹೊಂದಿದ್ದು ೭ ಮೂರನೇ ಉನ್ನತ ಹಂತದ ಆರೈಕೆಯ, ೫ ಎರಡನೇ ಹಂತದ ಆರೈಕೆಯ ಮತ್ತು ೨ ಪ್ರಾಥಮಿಕ ಹಂತದ ಆರೈಕೆಯ ಕ್ಲಿನಿಕ್‌ಗಳನ್ನು ಭಾರತ ಮತ್ತು ವಿದೇಶದಾದ್ಯಂತ ಸಂಸ್ಥೆ ಹೊಂದಿದ್ದು ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿ ೧೫ ಆಸ್ಪತ್ರೆಗಳಲ್ಲಿ ೫,೯೦೦ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಮಣಿಪಾಲ್ ಆಸ್ಪತ್ರೆ ಸಮಗ್ರ ಗುಣಪಡಿಸುವ ಮತ್ತು ರೋಗವನ್ನು ತಡೆಯುವ ಆರೈಕೆಯನ್ನು ವಿಶ್ವದ ಎಲ್ಲೆಡೆಯ ರೋಗಿಗಳಿಗೆ ನೀಡುತ್ತಿದೆ. ನೈಜೀರಿಯಾದ ಲಾಗೋಸ್‌ನಲ್ಲಿ ಮಣಿಪಾಲ್ ಆಸ್ಪತ್ರೆ ಒಂದು ಡೇ ಕೇರ್ ಕ್ಲಿನಿಕ್ ಹೊಂದಿದೆ. ವೈದ್ಯಕೀಯ ಸಂಶೋಧನಾ ಚಟುವಟಿಕೆಗಳಲ್ಲಿ ನೀತಿಯ ಮಟ್ಟಕ್ಕಾಗಿ ಎಎಎಚ್‌ಆರ್‌ಪಿಪಿ ಸಂಸ್ಥೆ ಮಾನ್ಯತೆ ಪಡೆದ ಪ್ರಥಮ ಆಸ್ಪತ್ರೆ ಎಂಬ ಗೌರವ ಮಣಿಪಾಲ್ ಆಸ್ಪತ್ರೆಯದ್ದಾಗಿದೆ. ಸಂಸ್ಥೆ ಎನ್‌ಎಬಿಎಲ್, ಎನ್‌ಎಬಿಎಚ್ ಮತ್ತು ಐಎಸ್‌ಒ ಪ್ರಮಾಣೀಕರಣವನ್ನೂ ಹೊಂದಿದೆ. ಮಣಿಪಾಲ್ ಆಸ್ಪತ್ರೆ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಆಸ್ಪತ್ರೆ ಕಂಪನಿಯಾಗಿದೆ. ಗ್ರಾಹಕ ಸಮೀಕ್ಷೆಯ ಪ್ರಕಾರ ರೋಗಿಗಳಿಂದ ಅತ್ಯಂತ ಹೆಚ್ಚಿನ ಶಿಫಾರಸು ಪಡೆಯುತ್ತಿರುವ ಆಸ್ಪತ್ರೆಯೂ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button