Kannada NewsKarnataka NewsLatest

*ಮಂಜುಗುಣಿಯಲ್ಲಿ ಮಾರ್ಚ್ 8ಕ್ಕೆ ಸಮರ್ಪಣಾ ಸಮಾರಂಭ*

ಪ್ರಗತಿವಾಹಿನಿ ಸುದ್ದಿ: ಶಿರಸಿ: “ಭೂ ವೈಕುಂಠ” ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಐತಿಹಾಸಿಕ ಶ್ರೀಕ್ಷೇತ್ರ, ಕರ್ನಾಟಕ ತಿರುಪತಿ ಖ್ಯಾತಿಯ ಮಂಜುಗುಣಿಯ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಪೂರ್ಣಗೊಂಡಿರುವ ವಿವಿಧ ಜೀರ್ಣೋದ್ಧಾರ ಹಾಗೂ ನೂತನ ಅಭಿವೃದ್ಧಿ ಕಾರ್ಯಗಳ ಸಮರ್ಪಣಾ ಸಮಾರಂಭವು ಮಾರ್ಚ್ 8ರ ಭಾನುವಾರದಂದು ನಡೆಯಲಿದೆ.


ಈ ಕುರಿತು ಮಾಹಿತಿ‌ ನೀಡಿದ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಂಜುಗುಣಿ, ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ
​2000ನೇ ಇಸವಿಯಿಂದ ಆರಂಭವಾದ ಪ್ರಾಕಾರ ಕಟ್ಟಡಗಳ ಸಮಗ್ರ ಜೀರ್ಣೋದ್ಧಾರ ಕಾರ್ಯ, ನಿತ್ಯ ಪ್ರಸಾದ ಭೋಜನ ವ್ಯವಸ್ಥೆ, ಗೋಶಾಲೆ, ತೀರ್ಥಕೆರೆಗಳ ನವೀಕರಣ, ಬೆಳ್ಳಿಯ ಅಶ್ವರಥ, ಮಹಾರಥದ ಜೀರ್ಣೋದ್ಧಾರ ಸೇರಿದಂತೆ ಹತ್ತಾರು ಸೇವೆಗಳು ಭಕ್ತರ ಸಹಕಾರದೊಂದಿಗೆ ನೆರವೇರಿವೆ ಎಂದು ತಿಳಿಸಿದ್ದಾರೆ.


ಪ್ರಸ್ತುತ ರಜತಮಯ ಶಿಖರ ಕಲಶ, ವಿಮಾನ ವೇಂಕಟೇಶ ಪ್ರತಿಷ್ಠೆ ಹಾಗೂ ಕರ್ನಾಟಕದಲ್ಲಿಯೇ ಅತಿ ವಿಸ್ತಾರವೆನಿಸಿದ ಸಂರಕ್ಷಣಾ ಪಟದಂತಹ ಅಪೂರ್ವ ಕಾರ್ಯಗಳು ಲೋಕಾರ್ಪಣೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.


​ಮಾರ್ಚ್ 7ರ ಶನಿವಾರದಂದು ಪೂರ್ವಾಂಗ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಮಾರ್ಚ್ 8ರ ಭಾನುವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Home add -Advt


​ಬೆಳಿಗ್ಗೆ 9:30ಕ್ಕೆ ನೂತನ ರಜತಮಯ (ಬೆಳ್ಳಿ) ಶಿಖರ ಕಲಶ ಸ್ಥಾಪನೆ, ​10:15ಕ್ಕೆ ಶಿಖರ ಕಲಶದಲ್ಲಿ ‘ವಿಮಾನ ವೇಂಕಟೇಶ’ ದೇವರ ಪ್ರತಿಷ್ಠಾಪನೆ, 10:20ಕ್ಕೆ 185 ಅಡಿ ಉದ್ದ ಹಾಗೂ 111 ಅಡಿ ಅಗಲದ ಬೃಹತ್ ಸಂರಕ್ಷಣಾ ಪಟದ ಸಮರ್ಪಣೆ ಆಗಲಿದೆ. ಇದು ಕರ್ನಾಟಕದಲ್ಲಿಯೇ ಅತ್ಯಂತ ವಿಸ್ತಾರವಾದ ಆಚ್ಛಾದನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.


ಅಂದು ​ಬೆಳಿಗ್ಗೆ 10:35ಕ್ಕೆ ನೂತನವಾಗಿ ನಿರ್ಮಾಣಗೊಂಡ ಬೆಳ್ಳಿಯ ‘ಭೂ ವೈಕುಂಠದ್ವಾರ ಮಂಟಪ’ ಪ್ರವೇಶ ಹಾಗೂ ಶಿಲಾಮಯ ಗಜಮಿಥುನಗಳ ಸಮರ್ಪಣೆ ಎಂದು ತಿಳಿಸಿದ ಅವರು, ​​ಮಧ್ಯಾಹ್ನ 12:45ಕ್ಕೆ ತೀರ್ಥಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ವಿವರಿಸಿದ್ದಾರೆ.


ಅಂದು ಮಧ್ಯಾಹ್ನ 1:30ರಿಂದ ಭಜನಾ ಕಾರ್ಯಕ್ರಮ ಹಾಗೂ 3:30ಕ್ಕೆ ‘ಭಕ್ತಾನುಗ್ರಹ ಸಭಾ’ ಜರುಗಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಂಕರ ಜಿ. ಪಂಡಿತ್ ಭಾಗವಹಿಸಲಿದ್ದಾರೆ. ಭೂ ವೈಕುಂಠ ದ್ವಾರ ಮಂಟಪಕ್ಕೆ ರೂಪಾಯಿ 5000 ಮೇಲ್ಪಟ್ಟು ನೀಡಿದ ದಾನಿಗಳಿಗೆ, ವಿಶೇಷ ಸೇವಾಕರ್ತರಿಗೆ, ಅಭಿಯಂತರರಿಗೆ, ಹಾಗೂ ಶಿಲ್ಪಿಗಳಿಗೆ ಶ್ರೀದೇವರ ಪ್ರಸಾದ ವಿತರಣೆ ಹಾಗೂ ಸಂಜೆ 5:30ಕ್ಕೆ ಕು. ತುಳಸಿ ಹೆಗಡೆ ಮತ್ತು ತಂಡದಿಂದ ‘ವಿಶ್ವಾಭಿಗಮನಮ್’ ಯಕ್ಷ ನೃತ್ಯ ರೂಪಕ ಪ್ರಸ್ತುತಿ ಆಗಲಿದೆ‌ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“ಭಗವಂತನು ಯಾರನ್ನು ಅನುಗ್ರಹಿಸುವ ಸಂಕಲ್ಪವನ್ನು ಮಾಡುತ್ತಾನೆಯೋ, ಅವನಿಂದ ಧನ ಅಥವಾ ಆಭರಣಗಳ ರೂಪದಿಂದ ವಸ್ತುವನ್ನು ಪ್ರೆರೇಪಿಸಿ ಪಡೆಯುತ್ತಾನೆ. ಇದಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ಶ್ರೀಕ್ಷೇತ್ರ ಮಂಜುಗುಣಿಯು ಭಗವತ್ ಸಾನಿಧ್ಯದ ದ್ಯೋತಕವಾಗಿ ಆಸ್ತಿಕ ಲೋಕಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ.”

-ಶ್ರೀನಿವಾಸ ಭಟ್ಟ‌ ಮಂಜುಗುಣಿ, ಪ್ರಧಾನ ಅರ್ಚಕರು

Related Articles

Back to top button