ಚನ್ನರಾಜ ಹಟ್ಟಿಹೊಳಿ ಗೆಲುವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ – ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವಿನಿಂದ ನಮ್ಮ ಪಕ್ಷಕ್ಕೆ ಶಕ್ತಿ ತುಂಬಲಿದ್ದು, ಆದ್ದರಿಂದ ಚನ್ನರಾಜ ಹಟ್ಟಿಹೊಳಿ ಗೆಲುವಿಗೆ ನಾವು, ನಿವೆಲ್ಲರೂ ಶ್ರಮಿಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಕಾಕತಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ಪ್ರಚಾರ ಸಭೆಯಲ್ಲಿಮಾತನಾಡಿದ ಅವರು, ಯಮಕನಮರಡಿ ಮತಕ್ಷೇತ್ರದಲ್ಲಿ ಚನ್ನರಾಜ ಹಟ್ಟಿಹೊಳಿ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸೋಣ ಎಂದು ಕರೆ ನೀಡಿದರು.
ಗ್ರಾಪಂ ಸದಸ್ಯರು ನಮ್ಮ ಹೃದಯ ಇದ್ದ ಹಾಗೆ, ನಿಮ್ಮ ಬೆಂಬಲ ಪ್ರತಿ ಚುನಾವಣೆಯಲ್ಲಿ ನಮಗೆ ಬೇಕು. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ನಿಮ್ಮ ಬೆಂಬಲ, ಸಹಕಾರ ನಮಗೆ ಬೇಕಾಗಿದೆ ಎಂದು ತಿಳಿಸಿದರು.
ಇವತ್ತು ಸಾಕಷ್ಟು ಬಿಜೆಪಿ ಮುಖಂಡರು ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಂದಿದ್ದಾರೆ. ನೀವು ಕೂಡ ಇನ್ನಷ್ಟು ಮತಕ್ಷೇತ್ರದಲ್ಲಿಅಭಿವೃದ್ಧಿ ಕಾಣಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಜಯ ಹೊನಮನಿ, ಸುರೇಶ ನಾಯಿಕ, ಹೊನಗಾ ಗ್ರಾಮ ಅಧ್ಯಕ್ಷ ಮಹೇಶ ದಂಡಗಿ( ತಂಬಾಕ ವಾಲಾ) ಇವರ ನೇತೃತ್ವದಲ್ಲಿ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಪ್ರದೀಪ್ ಎಂ.ಜಿ, ಸಿದ್ದು ಸುಣಗಾರ, ಕಾಕತಿ ಗ್ರಾಪಂ ಅಧ್ಯಕ್ಷ ಸುನೀಲ್ ಸುಣಗಾರ, ರಾಮಣ್ಣ ಗುಳ್ಳಿ, ಯಲ್ಲಪ್ಪ ಕೊಳೆಕರ್, ಜಂಗಲಿಸಾಬ್ ನಧಾಪ್, ಸುರೇಶ್ ನಾಯಿಕ, ಅನಿಲ ಪಾವಸೆ, ಸೈಯದ್ ಮನಸೂರ, ಆಷೀಪ್ ಮುಲ್ಲಾ, ಬೈರಗೊಡಾ ಪಾಟೀಲ, ರವಿ ಹೂಗಾರ, ಭಿಮ್ಮಣ್ಣ ಕಡಾಡಿ, ವಿಶ್ವಾಸ ತುಮರಿ ಸೇರಿದಂತೆ ಗ್ರಾಪಂ ಸದಸ್ಯರು, ಉಪಾಧ್ಯಕ್ಷರು ಇದ್ದರು.
ವಿವೇಕರಾವ್ ಬದಲು ಲಖನ್ ನಿಲ್ಲಿಸಿದ್ದೇಕೆ?
ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿಯೇ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಇರುವಂತ ಮತಗಳಲ್ಲಿ ಎರಡು ಸ್ಥಾನ ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಗೊಂದಲವಿದೆ. ರಮೇಶ್ ಜಾರಕಿಹೊಳಿ ಒಂದು ಲಖನ್ ಜಾರಕಿಹೊಳಿ ಅಥವಾ ಮಹಾಂತೇಶ ಕವಟಗಿಮಠ ಇಬ್ಬರಲ್ಲಿ ಒಬ್ಬರನ್ನು ಗೆಲ್ಲಿಸಬೇಕು. ಇಬ್ಬರನ್ನೂ ಗೆಲ್ಲಿಸುವ ಶಕ್ತಿ ಅವರಲ್ಲಿ ಇಲ್ಲವೆಂದರು.
ಬಿಜೆಪಿಯಲ್ಲಿಯೇ ಗೊಂದಲವಿದೆ. ಬಿಜೆಪಿ ಪಕ್ಷದ ಬ್ಯಾನರ್ ದಲ್ಲಿ ರಮೇಶ್ ಜಾರಕಿಹೊಳಿ ಕಾರ್ಯಕ್ರಮ ಮಾಡುತ್ತಾರೆ. ಅದೇ ವೇದಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ವೋಟ್ ಹಾಕಿ ಎನ್ನುತ್ತಾರೆ. ಮೊದಲು ಅದನ್ನು ಸರಿ ಮಾಡಿಕೊಳ್ಳಲು ಹೇಳಿ ಎನ್ನುವ ಮೂಲಕ ಎದುರಾಳಿಗಳಿಗೆ ತಿವಿದರು.
ಗ್ರಾಪಂ.ನಲ್ಲಿ ಕಾಂಗ್ರೆಸನವರೇ ಹೆಚ್ಚು ಗೆದ್ದಿದ್ದಾರೆ :
ಸಾಮಾನ್ಯವಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಶಾಸಕರ ಕಂಟ್ರೋಲ್ ದಲ್ಲಿ ಇರಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಶಾಸಕರಿರುವುದರಿಂದ ನಿಮ್ಮ ಅಭ್ಯರ್ಥಿಯೇ ಗೆಲುವು ಪಡೆಯಲಿದ್ದಾರೇಯೇ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ಹೆಚ್ಚಿಗೆ ಇದ್ದರೂ ಕೂಡ, ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚಿದ್ದಾರೆಂದರು.
ನಿಪ್ಪಾಣಿಯಲ್ಲಿ ಹೆಚ್ಚಿನ ಸದಸ್ಯರು ಕಾಂಗ್ರೆಸ್ ನವರು ಇದ್ದಾರೆ. ರಾಯಬಾಗ, ಕುಡಚಿ, ಅಥಣಿಯಲ್ಲಿ ಕೂಡಾ ಇದ್ದಾರೆ. ಕ್ಷೇತ್ರದಲ್ಲಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಸಹ ಗ್ರಾಮ ಪಂಚಾಯ್ತಿಯಲ್ಲಿ ಸದಸ್ಯರು ಕಾಂಗ್ರೆಸ್ ನವರು ಗೆದ್ದಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರನ್ನು ಒಂದಲ್ಲಾ ಒಂದು ರೀತಿ ಸುಲಿಗೆ ಮಾಡುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಿ ಇಂಟರ್ನೆಟ್ ಬೆಲೆ ಜಾಸ್ತಿ ಮಾಡಿದೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಪಕ್ಷ ವಿವೇಕರಾವ್ ಪಾಟೀಲ ಬಿಟ್ಟು, ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷೇತರರಾಗಿ ಲಖನ್ ಸ್ಪರ್ಧೆ ಮಾಡಿಸಿದ್ದೇನೆ ಎಂಬ ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿವೇಕರಾವ್ ಪಾಟೀಲ್ ಅವರ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದೇ ಆಗಿದ್ರೆ, ಲಖನ್ ಜಾಗದಲ್ಲಿ ವಿವೇಕರಾವ್ ಪಾಟೀಲ ನಿಲ್ಲಿಸಬೇಕಿತ್ತು. ಯಾಕೆ ಹಾಗೇ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಎರಡನೇ ಸುತ್ತಿನ ಪ್ರಚಾರ : ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರ ಮೊದಲ ಸುತ್ತಿನ ಪ್ರಚಾರ ನಡೆಸಿದ್ದೇವೆ. ಮುಖಂಡರೊಂದಿಗೆ ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಸಭೆ ನಡೆಸಿದ್ದೇವೆ. ಕಿತ್ತೂರು ಸೇರಿದಂತೆ ವಿವಿಧೆಡೆ ಎರಡನೇ ಸುತ್ತಿನ ಪ್ರಚಾರವನ್ನ ನಡೆಸಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ