Belagavi NewsBelgaum NewsKannada NewsKarnataka News

ಮಕ್ಕಳ ಭವಿಷ್ಯಕ್ಕಾಗಿ ರಾಜ್ಯ ಸರಕಾರದಿಂದ ಹಲವು ಮಹತ್ವದ ಕ್ರಮ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

​ 

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಕಾರ ಹಲವಾರು ಮಹತ್ವದ ತೀರ್ಮಾನಗಳನ್ನು ಮಾಡಿದ್ದು, ಅಂಗನವಾಡಿ ಶಿಕ್ಷಕರು ಅದಕ್ಕೆ ತಕ್ಕಂತೆ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.

​ಬೆಳಗಾವಿಯಲ್ಲಿ ಶುಕ್ರವಾರ, ಅಂಗನವಾಡಿ ಶಿಕ್ಷಕರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್, ವೇಯಿಂಗ್ ಮಷಿನ್ ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದ ಅಂಗನವಾಡಿಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸಿ ಗವರ್ಮೆಂಟ್ ಮಾಂಟೆಸ್ಸರಿ ಮಾಡಲು ನಿರ್ಧರಿಸಲಾಗಿದೆ. ಅಂಗನವಾಡಿಗಳ ಪುನಶ್ಚೇತನಕ್ಕೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 10 ಸಾವಿರ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕೇಂದ್ರ ಸರಕಾರದಿಂದ 20 ಸಾವಿರ ಸ್ಮಾರ್ಟ್ ಕ್ಲಾಸ್ ಗಳು ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ.  15 ಸಾವಿರಕ್ಕೂ ಹೆಚ್ಚು ಪದವೀದರ ಶಿಕ್ಷಕರು ಕೆಲಸ ಮಾಡುತ್ತಿದ್ದು, ಎಲ್ಲರಿಗೂ ತರಬೇತಿ ನೀಡಲು ನಿರ್ಧರಿಸಲಾಗಿದೆ. ನಿಮ್ಮ ಕೌಶಲ್ಯವನ್ನು ಹೆಚ್ಚಿಸಲು ತರಬೇತಿ ನೀಡಲಾಗುವುದು. ಇದಕ್ಕಾಗಿ 10 ಕೋಟಿ ರೂ. ತೆಗೆದಿರಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ 200 ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗಲಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಟ್ಟಡ ಮಂಜೂರಾಗಿರುವುದು ಜಿಲ್ಲೆಯ ಇತಿಹಾಸದಲ್ಲೇ ಮೊದಲು. ರಾಜ್ಯದ ವಿವಿಧೆಡೆ ತಲಾ 20 ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು.  ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಭರವಸೆಯನ್ನು ನಾನು ನೀಡಿದ್ದೇನೆ. ಅದನ್ನು ಹಠಕ್ಕೆ ಬಿದ್ದು ಮಾಡಿಸುತ್ತೇನೆ. ಮುಖ್ಯಮಂತ್ರಿಗಳೂ ಭರವಸೆ ನೀಡಿದ್ದಾರೆ. ಅದಾಗುವವರೆಗೂ ನನಗೆ ಸಮಾಧಾನವಿಲ್ಲ ಎಂದು ಹೆಬ್ಬಾಳಕರ್ ತಿಳಿಸಿದರು. 

ಇಡೀ ದೇಶವೇ ತಿರುಗಿ ನೋಡುವಂತೆ ಅಂಗನವಾಡಿಗಳಲ್ಲಿ ಕೆಲಸ ನಡೆಯುತ್ತಿದೆ. ನೀವೆಲ್ಲ ಯಶೋಧೆಯರಿದ್ದಂತೆ. ದೇವಕಿ ಶ್ರೀಕೃಷ್ಣನನ್ನು ಹೆತ್ತರೂ ಯಶೋಧೆ ಅತ್ಯಂತ ಮುತುವರ್ಜಿಯಿಂದ ಸಲಹಿದಂತೆ ನೀವು ಮಕ್ಕಳನ್ನು ಬೆಳೆಸುತ್ತೀರಿ. ನಿಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬಲು, ಶಕ್ತಿ ತುಂಬಲು ತಲಾ 13 ಸಾವಿರ ರೂ.ಮೌಲ್ಯದ ಆಧುನಿಕ ಮೊಬೈಲ್ ಫೋನ್ ನೀಡಲಾಗುತ್ತಿದೆ. ರಾಜ್ಯಾದ್ಯಂತ ಏಕರೂಪದ ಯುನಿಫಾರ್ಮ್ ವಿತರಿಸಲಾಗುತ್ತಿದೆ. ಮೆಡಿಸಿನ್ ಕಿಟ್, ವೇಯಿಂಗ್ ಮಷಿನ್ ನೀಡಲಾಗುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಈ ಕಾರ್ಯಕ್ರಮದೊಂದಿಗೆ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಬೇಕೆನ್ನುವ ಕನಸನ್ನು ಹೊತ್ತು ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನನಗೆ ಕೆಟ್ಟ ಹೆಸರು ಬರುತ್ತದೆ. ನೀವೆಲ್ಲ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ನೀವೇ ನನಗೆ ಶಕ್ತಿ ಎಂದು ಸಚಿವರು ಹೇಳಿದರು.

ನಮ್ಮ ಮುಂದೆ ಹೇಳಲಿ

ನಾನು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಆದರೆ ಒಬ್ಬ ತಾಯಿಯಾಗಿ ​ಮಗನ ಸೋಲಾದಾಗಾ ಸಂಕಟವಾಯಿತು. ಇದು ಎಲ್ಲ ತಾಯಂದಿರಿಗೆ ಸಹಜವಾದ ನೋವು. ಮಗನಿಗೆ ಇನ್ನೂ ಸಾಕಷ್ಟು ಭವಿಷ್ಯವಿದೆ. ಸಾಕಷ್ಟು ಮುಂದೆ ಹೋಗಬೇಕಿದೆ. ಬಿದ್ದವನು ಎದ್ದು ನಿಲ್ಲುತ್ತಾನೆ. ಆದರೆ, ಚುನಾವಣೆ ವೇಳೆಯಲ್ಲಿ ನಾನು ಅಂಗನವಾಡಿ ಕಾರ್ಯಕರ್ತೆಯರಿಂದ ತಲಾ ಒಂದು ಲಕ್ಷ ರೂ. ಸಂಗ್ರಹಿಸಿದ್ದೇನೆಂದೂ, ನಿಮ್ಮ ಶಾಪದಿಂದಲೇ ನನ್ನ ಮಗನಿಗೆ ಸೋಲಾಗಿದೆ ಎಂದೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ ಎಂದು ಈಗಷ್ಟೆ ಮಾಧ್ಯಮದವರು ನನ್ನನ್ನು ಪ್ರಶ್ನಿಸಿದರು. ನಾನು ಯಾರಿಂದಾದರೂ ಹಣ ಪಡೆದಿದ್ದೇನಾ? ಎಂದು ಸಚಿವರು ಪ್ರಶ್ನಿಸುತ್ತಿದ್ದಂತೆ, ನಮ್ಮ ಮುಂದೆ ಬಂದು ಅವರು ಹೇಳಲಿ, ತಕ್ಕ ಉತ್ತರ ಕೊಡುತ್ತೇವೆ ಎಂದು ಕಾರ್ಯಕರ್ತೆಯರು ಅಬ್ಬರಿಸಿದರು. 

 ವೈರಿಗಳ ಕಡೆಯ ಅಸ್ತ್ರ ಆರೋಪ ಮಾಡುವುದು. ಅದಕ್ಕೆಲ್ಲ ಉತ್ತರ ಕೊಡುತ್ತ ಹೊದರೆ ಕೆಲಸ ಮಾಡಲು ಆಗುವುದಿಲ್ಲ. ಯಾರೇ ಆರೋಪ ಮಾಡಲಿ, ನಾವು ಶೃದ್ಧೆ, ಭಕ್ತಿಯಿಂದ ಕೆಲಸ ಮಾಡೋಣ. ಇಲಾಖೆಯನ್ನು ಮಾದರಿಯನ್ನಾಗಿ ಮಾಡಲು ನಾನು ಕಂಕಣಬದ್ಧನಾಗಿದ್ದೇನೆ. ಅಂಗನವಾಡಿಗೆ ಕಳಪೆ ಆಹಾರ ಪದಾರ್ಥ ಪೂರೈಕೆಯಾದರೆ ಮುಲಾಜಿಲ್ಲದೆ ವಾಪಸ್ ಕಳಿಸಿ. ಕಳಪೆ ಆಹಾರ ಪೂರೈಕೆಯಾದರೆ ಸಿಡಿಪಿಒ ಮತ್ತು ಉಪನಿರ್ದೇಶಕರನ್ನು ಅಮಾನತುಗೊಳಿಸುವುದಾಗಿ ಈಗಾಗಲೆ ಎಚ್ಚರಿಕೆ ನೀಡಿದ್ದೇನೆ. ಅಂಗನವಾಡಿಗಳ ಬಳಿ ವಿದ್ಯುತ್ ಲೈನ್ ಅಪಾಯದ ಸ್ಥಿತಿಯಲ್ಲಿದ್ದರೆ, ಮರಗಳು ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣ ಸಂಬಂಧಿಸಿದವರಿಗೆ ತಿಳಿಸಿ ಸರಿಪಡಿಸಿ. ಮಕ್ಕಳಿಗೆ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅವರು ಸೂಚಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಾತನಾಡಿ, ಉತ್ತಮ ಮೊಬೈಲ್ ಕೊಡಿಸುವಂತೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು. ಈಗ ಲಕ್ಷ್ಮೀ ಹೆಬ್ಬಾಳಕರ್ ಅವರಿಂದಾಗಿ ಫಲ ಸಿಕ್ಕಿದೆ. ಸಚಿವರು ನುಡಿದಂತೆ ನಡೆಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸಿಗುವಂತೆ ಮಾಡಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮರಡ್ಡಿ ಪಾಟೀಲ ಮಾತನಾಡಿ, ಮಾದರಿ ಅಂಗನವಾಡಿಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಲವಾರು ಕ್ರಮಗಳ ಮೂಲಕ ಅಂಗನವಾಡಿಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು. ಸಿಡಿಪಿಒ ಸುಮಿತ್ರಾ ಸ್ವಾಗತಿಸಿದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಅಡವಿಮಠ ವೇದಿಕೆಯಲ್ಲಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button