ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್
ಇಂದಿನ ಜಗತ್ತಿನಲ್ಲಿ ನಿಜವಾದ ಸ್ನೇಹ ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮಿಯತೆ ಮಾಯವಾಗಿದೆ. ಮೊಬೈಲ್‌ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜೊತೆಗೆ ಮಾತನಾಡುವುದು ಕಡಿಮೆ ಆಗಿದೆ. ಟಿವಿ ಪರದೆಯ ಮೇಲೆ ಬರುವ ನೆಚ್ಚಿನ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆಯೇ ಹೊರತು ಅತಿಥಿಗಳ ಸತ್ಕಾರ ಮಾಡಲು ಜನರಿಗೆ ಸಮಯದ ಅಭಾವವಿದೆ. ಈ ದೃಶ್ಯಗಳು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಾಣುತ್ತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ನಮ್ಮ ಪೂರ್ವಜರು ಹಬ್ಬಗಳ ಆಚರಣೆಗೆ ಮಹತ್ವ ನೀಡುತ್ತಾ ಬಂದಿದ್ದಾರೆ.
ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ‘ಸಂಕ್ರಾಂತಿ’ ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಇದೆ. ಈ ಹಬ್ಬವು ಪ್ರತಿ ವರ್ಷ ಜನವರಿ ಮಾಸದಂದು ದಿನಾಂಕ ೧೪/೧೫ ಕ್ಕೆ ಬರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಓರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪ.ಬಂಗಾಳದಲ್ಲಿ ಈ ಹಬ್ಬವನ್ನು ‘ಮಕರ ಸಂಕ್ರಾಂತಿ’ ಅಥವಾ ‘ಸಂಕ್ರಾಂತಿ’, ಎಂದು ಕರೆಯುತ್ತಾರೆ.
ತಮಿಳುನಾಡಿನಲ್ಲಿ ‘ಪೊಂಗಲ್’ (ಹೊಸ ವರ್ಷದ ಹಬ್ಬ) ಎಂದು ಕರೆಯುತ್ತಾರೆ. ರಾಜಸ್ಥಾನ, ಗುಜರಾತ್‌ದಲ್ಲಿ ’ಉತ್ತರಾಯಣ’ ಎಂದು ಕರೆಯುತ್ತಾರೆ. ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬ್‌ದಲ್ಲಿ ’ಮಾಘಿ’ ಎಂದು ಕರೆಯುತ್ತಾರೆ. ಅಸ್ಸಾಂನಲ್ಲಿ ’ಮಾಘ ಬಿಹು’, ಕಾಶ್ಮೀರದಲ್ಲಿ ’ಶಿಶುರ ಸೇಂಕ್ರಾತ’ ಶಬರಿಮಲೈ ಬೆಟ್ಟದಲ್ಲಿ ’ಮಕರ ವಿಲಕ್ಕು’ ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ ’ಮಾಘಿ’, ಬರ್ಮಾದಲ್ಲಿ ’ಥಿಂಗ್ಯಾನ’, ಕಾಂಬೋಡಿಯಾದಲ್ಲಿ ’ಮೊಹಸಂಗ್ರನ’, ಥೈಲಾಂಡ್‌ನಲ್ಲಿ ’ಸಂಗ್ರಾನ’ ಎಂದು ಕರೆಯಲಾಗುತ್ತದೆ.
ಈ ಹಬ್ಬದ ಮೊದಲನೆ ದಿನ ‘ಭೋಗಿ’, ಎರಡನೇ ದಿನ ‘ಕರಿ’ ಎಂದು ಹೇಳಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ ‘ಮಕರ ಸಂಕ್ರಾಂತಿ’. ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ, ಸಂಕ್ರಾಂತಿಗೆ ಸೂರ್ಯನನ್ನು ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿ ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಮಹಾರಾಜ ಸಾಗರನ ೬೦,೦೦೦ ಮಕ್ಕಳಿಗೆ ಮುಕ್ತಿ ಸಿಕ್ಕಿರುವ ದಿನವು ಇದೇ ಆಗಿದೆ. ಆದ್ದರಿಂದ ಗಂಗಾಸಾಗರ ಮೇಳ ನಡೆಯುತ್ತದೆ. ಮಹಾಭಾರತದ ಇಚ್ಛಾ ಮರಣಿ ಭೀಷ್ಮಪಿತನು ದೇಹ ತ್ಯಜಿಸಿದ ದಿನವು ಸಂಕ್ರಾಂತಿ ಎಂದು ಹೇಳಲಾಗುತ್ತದೆ.
ಈ ಹಬ್ಬದ ಜೊತೆಗೆ ಬರುವ ’ರಥಸಪ್ತಮಿ’ ಎಂದರೆ ಮಾರ್ಗಶಿರ ಮಾಸ, ಶುಕ್ಲಪಕ್ಷದ ಏಳನೆಯ ದಿನ ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ.
’ಸಪ್ತಮೀ ಸಹಿತೋ ದೇವಾ ಗೃಹಣಾರ್ಘ್ಯಂ ದಿವಾಕರಃ’
ಈ ಶ್ಲೋಕವನ್ನು ಪಠಿಸುತ್ತ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುತ್ತಾರೆ. ಅಂದು ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಎಕ್ಕೆಯ ಎಲೆಯನ್ನು ಇಟ್ಟು ಸ್ನಾನ ಮಾಡಿ ಸೂರ್ಯನ ೧೦೮ ನಾಮಗಳನ್ನು ಉಚ್ಚರಿಸಿ ಅವನಿಗೆ ೧೦೮ ನಮಸ್ಕಾರ ಮಾಡುತ್ತಾರೆ. ೧೦೮ ಆಗದಿದ್ದರೂ ಕನಿಷ್ಠ ೧೨ ಹೆಸರುಗಳಾದ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರಗಳನ್ನು ಜಪಿಸಿ ಮನೆಯ ಒಳಗೆ ನಮಸ್ಕಾರ ಮಾಡುವ ಪದ್ಧತಿ ಇದೆ. ಅಂದು ರವೆ ಅಥವಾ ಅವಲಕ್ಕಿಯ ಪಾಯಸವನ್ನು ಮಾಡಿ ಸೂರ್ಯನಿಗೆ ನೈವೇದ್ಯ ಇಡುತ್ತಾರೆ. ಈ ದಿನ ಮಕ್ಕಳಿಗೆ ಕರಿ ಎರೆಯುವ ಸಂಪ್ರದಾಯವಿರುವುದರಿಂದ ಕರಿ ದಿನ ಎಂದು ಕರೆಯುತ್ತಾರೆ.
ಒರಿಸ್ಸಾ ರಾಜ್ಯದಲ್ಲಿನ ಕೋಣಾರ್ಕ, ಗಯಾದ ದಕ್ಷಿಣಾರ್ಕ, ರಾಜಸ್ಥಾನದ ರಣಕಪುರ, ಗುಜರಾತ್‌ನ ಮಥುರ, ಮಧ್ಯಪ್ರದೇಶದ ಉನ್ನಾವ್, ಅಸ್ಸಾಂನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂ ಮಂತಾದ ಸ್ಥಳಗಳಲ್ಲಿ ಸೂರ್ಯನ ದೇವಸ್ಥಾನಗಳಿದ್ದು ರಥಸಪ್ತಮಿಯ ದಿನ ವಿಶೇಷ ಪೂಜೆ ನಡೆಯುತ್ತದೆ.
ರಾಜಸ್ಥಾನ, ಗುಜರಾತ್‌ದಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗಾಳಿಪಟ ಉತ್ಸವ ನಡೆಯತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಅನೇಕ ವರ್ಷಗಳಿಂದ ಗಾಳಿಪಟ ಉತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ ೧೮-೨೧ ರಂದು ಮಾಲಿನಿ ಸಿಟಿಯಲ್ಲಿ ನಡೆಯವ ಉತ್ಸವ ದಲ್ಲಿ ರಾಜ್ಯ-ರಾಷ್ಟ್ರವಷ್ಟೇ ಅಲ್ಲ, ಹಲವಾರು ದೇಶಗಳ ಗಾಳಿಪಟ ಹಾರಾಟಗಾರರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗಾಗಿ ಹಾಗೂ ಮಹಿಳೆಯರಿಗಾಗಿ ಒಂದೊಂದು ದಿನ ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತ್ತಿದೆ.
ಭೋಗಿ ಹಬ್ಬಕ್ಕೆ ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆಯನ್ನು ವಿಶೇಷವಾಗಿ ಮಾಡಿದರೆ, ಸಂಕ್ರಾಂತಿಯ ದಿನ ಎಳ್ಳು ಮಿಶ್ರಿತ ಸ್ನಾನ, ಸಿಹಿ ಭೋಜನ ಮಾಡುವುದು ರೂಢಿಯಲ್ಲಿದೆ. ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗಜ್ಜರಿ, ಕಡಲೆ ಮುಂತಾದ ಆಹಾರ ಪದಾರ್ಥಗಳ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಹಿತಕರವಾಗಿದೆ. ಅಂದು ವಿಶೇಷವಾಗಿ ನದಿ, ಕೆರೆ ಅಥವಾ ಹಳ್ಳಗಳಲ್ಲಿ ಸ್ನಾನವನ್ನು ಮಾಡುತ್ತಾರೆ. ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ.
ದಾನ ಧರ್ಮವನ್ನು ಮಾಡಿದಾಗ ‘ಸಂಕ್ರಾಂತಿ ಪುರುಷ” ಒಳ್ಳೆಯ ಫಲವನ್ನು ನೀಡುವನು ಎಂದು ನಂಬುತ್ತಾರೆ. ಸಂಕ್ರಾಂತಿಯ ದಿನ ಪರಸ್ಪರ ಭೇಟಿಯಾಗಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ. ಆಧುನಿಕ ಜಗತ್ತಿನಲ್ಲಿ ಎಳ್ಳು ಬೆಲ್ಲದ ಸ್ಥಾನವನ್ನು ಸಕ್ಕರೆ ಪಾಕದಿಂದ ತಯಾರಿಸಿದ ‘ಕುಸರೆಳ್ಳು’ ಪಡೆದುಕೊಂಡಿದೆ.
ಭಾರತೀಯರ ಪ್ರತಿಯೊಂದು ಹಬ್ಬಗಳ ಆಚರಣೆಯಲ್ಲಿ ಜಾತಿ, ಮತ, ವರ್ಣ ಭಾಷೆಭೇದಗಳೆಲ್ಲವನ್ನು ಮರೆತು ಸ್ನೇಹ, ಪ್ರೀತಿ, ಮಧುರತೆ, ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಎಳ್ಳು ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿದ್ದರೆ, ಬೆಲ್ಲ ಸಿಹಿ ಮತ್ತು ಮಧುರತೆಯ ಪ್ರತೀಕವಾಗಿದೆ. ನಮ್ಮಲ್ಲಿ ಪ್ರೀತಿ, ಸ್ನೇಹ ಬೆಳೆಯಬೇಕೆಂದರೆ, ನಾವು ನಮ್ಮ ದೇಹದ ಧರ್ಮಗಳನ್ನು ಮರೆತು, ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನ ಮಕ್ಕಳು; ಅಲ್ಲಾ, ಖುದಾ, ಗಾಡ್, ಈಶ್ವರನ ಸಂತಾನರು, ಜಾತಿಯಲ್ಲದ ಪರಮಜ್ಯೋತಿಯ, ದಿವ್ಯ ಜ್ಯೋತಿಗಳು ನಾವು ಎಂದು ತಿಳಿದು ನಡೆದುಕೊಳ್ಳಬೇಕಾಗಿದೆ.
ಮಹಾತ್ಮ ಬಸವಣ್ಣನವರ ವಚನದಲ್ಲಿರುವ ‘ಇವನಾರವ ಇವನಾರವ ಎಂದೆಣಿಸದಿರಯ್ಯ, ಇವನಮ್ಮವ ಇವನಮ್ಮವ’ ಎಂದು ತಿಳಿದು ಸರ್ವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ನಮ್ಮ ಮಾತುಗಳು ಮುತ್ತಿನಂತೆ ಇರಬೇಕು, ಮಿತ ಹಾಗು ಮಧುರವಾಗಿರಬೇಕು, ಕಟುವಚನಗಳನ್ನು ತ್ಯಜಿಸಿ ಸತ್ಯವಚನರಾಗಿರಬೇಕು. ಆದ್ದರಿಂದಲೇ ಹಿಂದಿ ಭಾಷೆಯಲ್ಲಿ ‘ಗುಡ್ ನಹಿ ದೋ ಲೆಕಿನ್ ಗುಡ್ ಜೈಸಾ ಮಿಠಾ ತೊ ಬೊಲೊ’ ಅಂದರೆ ‘ಬೆಲ್ಲವನ್ನು ಕೊqದೇ ಇದ್ದರೂ ಪರ‍್ವಾಗಿಲ್ಲ, ಬೆಲ್ಲದಂತೆ ಸಿಹಿ ಮಾತನಾಡಿ’ ಎಂಬ ನಾಣ್ಣುಡಿ ಇದೆ.
ಮಹಾರಾಷ್ಟ್ರದಲ್ಲಿ ಎಳ್ಳು ಮತ್ತು ಸಕ್ಕರೆ ಹಾಗೂ ಕುಸುರಿಕಾಳನ್ನು ಹಂಚುವಾಗ ’ತಿಳ್ಗುಳ್ ಘ್ಯಾ ಆಣಿ ಗೋಡ ಗೋಡ ಬೋಲಾ’ ಎಂದು ಹೇಳುತ್ತಾರೆ. ನಮ್ಮಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಭಾವನೆ ಜಾಗೃತವಾದಾಗ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುವುದು. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಬೆಳೆಯುತ್ತದೆ. ಸಂಕ್ರಾಂತಿ ಎಂದರೆ ಪರಸ್ಪರ ಸಂಸ್ಕಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಕ್ರಾಂತಿಯನ್ನು ಮಾಡಬೇಕು ಎಂದರ್ಥ. ಆಗಲೇ ಸಂಕ್ರಾಂತಿ ಹಬ್ಬಕ್ಕೆ ಒಂದು ವಿಶೇಷ ಅರ್ಥ ಬಂದಂತಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ