*14 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ*: *ಪ್ರಿಯಕರ ಇಸಾಯ್ ಜೊತೆ ಹಸೆಮಣೆ ಏರಿದ ಅರ್ಜುನ್ ಸರ್ಜಾ ಪುತ್ರಿ ಅಂಜನಾ *

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟ ಅರ್ಜುನ್ ಸರ್ಜಾ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಕಿರಿಯ ಪುತ್ರಿ ಅಂಜನಾ, ಕಳೆದ 14 ವರ್ಷಗಳಿಂದ ಪ್ರೀತಿಸುತ್ತಿದ್ದ ಇಟಲಿ ಮೂಲದ ಉದ್ಯಮಿ ಇಸಾಯ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ವರ್ಷ ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ, ಇದೀಗ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ಶುಭಸುದ್ದಿ ಅಭಿಮಾನಿಗಳ ಗಮನ ಸೆಳೆದಿದೆ.

ಇಸಾಯ್ ಇಟಲಿ ಪ್ರಜೆಯಾಗಿದ್ದು, ಜಾಗತಿಕ ಬ್ರ್ಯಾಂಡಿಂಗ್ ಕ್ಷೇತ್ರದಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಜನಾ ಮತ್ತು ಇಸಾಯ್ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿದೆ. ವಿಶೇಷವೆಂದರೆ, ಎಲ್ಲರೂ ಭಾರತೀಯ ಶೈಲಿಯ ಉಡುಪು ಧರಿಸಿ ಸಂಪ್ರದಾಯಬದ್ಧವಾಗಿ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿವಾಹ ಸಮಾರಂಭ ವಿದೇಶದಲ್ಲಿ ನಡೆದಿದೆ.

ಅಂಜನಾ ಸರ್ಜಾ ಸಿನಿಮಾ ರಂಗದಿಂದ ದೂರ ಉಳಿದಿದ್ದು, ಫ್ಯಾಷನ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶದಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಂಜನಾ, ವೈಯಕ್ತಿಕ ಜೀವನದಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಕಳೆದ ವರ್ಷ ಇಟಲಿಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂಜನಾ ಮತ್ತು ಇಸಾಯ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ನಟಿಯಾಗಿದ್ದು, 2024ರಲ್ಲಿ ತಮಿಳು ನಟ ಉಮಾಪತಿ ರಾಮಯ್ಯ ಅವರನ್ನು ವಿವಾಹವಾಗಿದ್ದರು. ಇದೀಗ ಕಿರಿಯ ಪುತ್ರಿ ಅಂಜನಾ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದರಿಂದ ಸರ್ಜಾ ಕುಟುಂಬದಲ್ಲಿ ಮದುವೆಯ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



