Belagavi NewsBelgaum NewsKannada NewsKarnataka NewsNationalPolitics

*ಹಿಂದಿ ದಿವಸ್‌ ವಿರುದ್ಧ ಕರವೇ  ಕಾರ್ಯಕರ್ತರ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕೇಂದ್ರ ಸರ್ಕಾರ ಸೆ.14ರಂದು ‘ಹಿಂದಿ ದಿವಸ್‌’ ಆಚರಣೆಯ ಹೆಸರಿನಲ್ಲಿ ಅನ್ಯಭಾಷಿಕರ ಮೇಲೆ ಹಿಂದಿ ಹೇರಿಕೆ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಕರವೇ  ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕರವೇ  ಕಾರ್ಯಕರ್ತರು ರೈಲ್ವೆ ವೃತ್ತದಲ್ಲಿ ಶನಿವಾರ  ಪ್ರತಿಭಟಿಸಿ,  ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು. 

ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ. ಈ ಮೂಲಕ ದೇಶವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ. ಭಾರತದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ ವೈವಿಧ್ಯತೆಯನ್ನು ಹಾಳು ಮಾಡಲು ಹಿಂದಿ ಸಾಮ್ರಾಜ್ಯಶಾಹಿಗಳು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ಹೊರಹಾಕಿದರು.

ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ಈ ದೇಶದ ಬಹುತ್ವ, ಸಾರ್ವಭೌಮತೆಯನ್ನು ಕಾಪಾಡಬೇಕು.  ಹಿಂದಿಗೆ ಅನೈತಿಕವಾಗಿ ಮನ್ನಣೆ ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಿಗರು ನಾವು ಮೊದಲು  ಕನ್ನಡಕ್ಕೆ ಆಧ್ಯತೆ ನೀಡಬೇಕು. ಕನ್ನಡವನ್ನೇ ಪೂಜಿಸಬೇಕು ಎಂದು  ಪ್ರತಿಭಟನಾಕಾರರು ಮನವಿ ಮಾಡಿಕೊಂಡರು. ಈಗಾಗಲೇ ಕನ್ನಡ ನಾಮಫಲಕ ಅಳವಡಿಕೆಗೆ ದೊಡ್ಡ ಜಯ ಸಿಕ್ಕಿದೆ. ಕನ್ನಡಿಗರು ಮೊಳಗಿಸಿದ ಒಂದೇ ಒಂದು ಕರೆಗೆ ಅಂಗಡಿ ವ್ಯಾಪಾರಸ್ಥರು ಬೆಂಬಲ ನೀಡಿದ್ದಾರೆ. ಹೀಗೆ ಹಿಂದಿ ಹೇರಿಕೆಗೆ ವಿರೋಧಕ್ಕೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕು ಎಂದು ಮನವಿ ಮಾಡಿಕೊಂಡು.

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು. ಅಂತಾರಾಜ್ಯ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ವ್ಯವಹಾರಗಳೂ ಸಹ ಕನ್ನಡ ನುಡಿಯಲ್ಲೇ ಆಗಬೇಕು. ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕು. ನಮ್ಮ ಶಾಲಾ ಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಸಿದ್ದಾರೆ.

ಕರವೇ ಜಿಲ್ಲಾಧ್ಯಕ್ಷ  ದೀಪಕ್ ಗುಡಗನಟ್ಟಿ ಅವರು ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ  ಅವರು  ಹಿಂದಿ ಹೇರಿಕೆ ವಿರೋಧಿಸಿ  ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಕೇಂದ್ರ ಹಿಂದಿ ಸಪ್ತಾಹ ದಿವಸ್  ಕಾರ್ಯಕ್ರಮನ್ನು ತಡೆಯಲು ನಾವು ಗಟ್ಟಿಯಾಗಿ ನಿಲ್ಲಬೇಕಿದೆ.  ‘ಪತ್ರ ವ್ಯವಹಾರ, ನಾಮಫಲಕ ಸೇರಿ ವಿವಿಧೆಡೆ ಹಿಂದಿ ಬದಲು ಕನ್ನಡ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆ ತಿಳಿದವರು ಇಲ್ಲಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಇಲ್ಲಿ ವ್ಯವಹಾರ ನಡೆಸುವಾಗ ಕನ್ನಡ ಭಾಷೆ ಬಳಕೆಗೆ ಮೊದಲ ಆದ್ಯತೆ ನೀಡಬೇಕು. ಆದರೆ, ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರಲಾಗುತ್ತಿದೆ. ಈ ಮೂಲಕ ಕನ್ನಡಿಗರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರಲಾಗುತ್ತಿದೆ. ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ, ಬ್ಯಾಂಕಿನ ಡಿಜಿಟಲ್ ನಾಮಫಲಕಗಳು, ಎಟಿಎಂ ಯಂತ್ರಗಳು, ಅರ್ಜಿ ಪ್ರತಿಗಳು ಎಲ್ಲೆಡೆ ಕನ್ನಡಕ್ಕೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಈ ರಾಜ್ಯದ ಸಂಸದರರು ಇದರ ಬಗ್ಗೆ ಎಚ್ಚೆತ್ತಕೊಂಡು, ಇಲ್ಲಿನ ಜನಪ್ರತಿನಿಧಿಗಳು ನಿಯೋಗದೊಂದಿಗೆ ಕೇಂದ್ರ  ಸರ್ಕಾರಕ್ಕೆ  ಹಿಂದಿ ಹೇರಿಕೆ ವಿರೋದ ಮನವಿ ಮಾಡಿಕೊಳ್ಳಬೇಕು. ಇದನ್ನು ತಡೆಯಲು  ಸಂಸದರರು ಗಟ್ಟಿಯಾಗಿ ನೀಲ್ಲಬೇಕಿದೆ. ನಮ್ಮ ಹೋರಾಟಕ್ಕೆ ಸರ್ಕಾರಗಳು ಸ್ಪಂಧಿಸದಿದರೆ ಮುಂದಿನ ದಿನಗಳಲ್ಲಿ ಹೋರಾಟ,  ಉಗ್ರ ಸ್ವರೂಪ ಪಡೆದುಕೊಳ್ಳಲಿದೆ. ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್‌ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರ್ಕಾರ ಮಟ್ಟದಲ್ಲಿ ಇದನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ರೈಲ್ವೆ ವೃತ್ತದಲ್ಲಿ  ಅಳವಡಿಸಲಾದ  ಅನ್ಯಭಾಷಿಕ ಬ್ಯಾನರ್‌ ನ್ನು ಕರವೇ  ಕಾರ್ಯಕರ್ತರು  ಹರಿದು ಹಾಕಿ  ಆಕ್ರೋಶ ಹೊರಹಾಕಿದರು. ಈ ವೇಳೆ  ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದಂತೆ  ಪೊಲೀಸರು ಲಾಠಿ ಪ್ರಹಾರ  ನಡೆಸಿ  ಪ್ರತಿಭಟನಾಕಾರರನ್ನು ಚದುರಿಸಿ ಕಾರ್ಯಕರ್ತರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ  ಸುರೇಶ್ ಗವನ್ನವರ, ‌ ಗಣೇಶ ರೋಖಡೆ, ಸತೀಶ್ ಗುಡದವರ, ವಾಸು ಬಸ್ಸನಾಯಿಕ, ಹೋಳೆಪ್ಪಾ ಸುಳಧಾಳ, ಗಂಗಾಮ ಶಿಗ್ಗಿಹಳ್ಳಿ, ಮಾರುತಿ ಮತ್ತವಾಡ, ಖನಯ್ಯಾ ನಾಯಿಕ, ರಾಜು ನಾಶಿಪುಡಿ , ಬಸವರಾಜ ದಡ್ಡನವರ ಲೋಕೇಶ್ ರಾಥೋಡ್ ಹಾಗೂ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button