Karnataka News

*ಬಾಣಂತಿಯರ ಸಾವು ಪ್ರಕರಣ ಎಸ್‌ಐಟಿಗೊಳಪಡಿಸಲು ಒತ್ತಾಯ*

ಪಾರ್ಮಾ ಲಾಬಿ ಮಣಿಸಲು ವಿಪಕ್ಷದ ಸದಸ್ಯರಿಂದ ಸರ್ಕಾರಕ್ಕೆ ಸಲಹೆ


ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಸುವರ್ಣಸೌಧ:
ರಾಜ್ಯದ ವಿವಿಧೆಡೆ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವು ವಿಷಯವು ವಿಧಾನ ಪರಿಷತ್ತಿನಲ್ಲಿ ಡಿ.17ರಂದು ಚರ್ಚೆಗೆ ಬಂದಿತು.


ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಬಾಣಂತಿಯರ ಸಾವಿನ ಕುರಿತು ಪರಿಷತ್ ಗೆ ಹೇಳಿಕೆ ನೀಡಿದರು.

ನವೆಂಬರ್.11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. 5 ಬಾಣಂತಿಯರು ಸಾವಿಗೀಡಾದ ವಿಷಯ ತಿಳಿಯುತ್ತದ್ದಂತೆ ತಜ್ಞ ವೈದ್ಯರ ತಂಡ ರಚಿಸಲಾಗಿದೆ. ತಂಡವು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. ಈ ವರದಿ ಆಧರಿಸಿ ಆರೋಗ್ಯ ಇಲಾಖೆಯು ರಿಂಗರ್ ಲ್ಯಾಕ್ವೇಟ್ ದ್ರಾವಣ ಬಳಕೆಯನ್ನು ಈಗಾಗಲೇ ಹಿಂಪಡೆಯಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಬಾಣಂತಿಯರ ಸಾವು ಕುರಿತು ಪರಿಶೀಲನಾ ಸಭೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಎಂಎಸ್ ಪಶ್ಚಿಮ ಬಂಗಾಳ ಕಂಪನಿ ಮತ್ತು ಸಂಬAಧಿಸಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮವಾಗುವಂತೆ ಪ್ರಕರಣ ಕುರಿತು ಭಾರತ ಸರ್ಕಾರದ ಡ್ರಗ್ ಕಂಟ್ರೋಲರ್ ಜನರಲ್ ಅವರಿಗೆ ಪತ್ರ ಬರೆಯಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ನಾನಾ ಕ್ರಮಕ್ಕಾಗಿ ಎಂ.ಕನಗವಲ್ಲಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.


ಕೆಲವು ಪಾರ್ಮಾ ಕಂಪನಿಗಳು ನಮ್ಮ ದೇಶಕ್ಕೆ ಒಂದು ರೀತಿ, ವಿದೇಶಕ್ಕೆ ಒಂದು ರೀತಿಯಲ್ಲಿ ಔಷಧಿಯನ್ನು ವಿತರಿಸುತ್ತಿವೆ. ಗುಣಮಟ್ಟದ ಔಷಧಿ ತಯಾರಿಕೆಯ ವಿಷಯದಲ್ಲಿ ಉಂಟಾದ ಏರುಪೇರಿನ ಕಾರಣದಿಂದಲೇ ಬಾಣಂತಿಯರ ಮರಣ ಸಂಭವಿಸಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.
ಈ ಪ್ರಕರಣವನ್ನು ಎಸ್‌ಐಟಿಗೆ, ಲೋಕಾಯುಕ್ತಕ್ಕೆ ಕೊಡಬೇಕು ಎಂದು ವಿಪಕ್ಷಗಳು ಸದಸ್ಯರ ನೀಡಿದ ಸಲಹೆಯನ್ನು ಪರಿಗಣಿಸಲಾಗುವುದು. ಅತ್ಯಂತ ಗಂಭೀರವಾದ ಈ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎನ್ನುವ ವಿಪಕ್ಷ ಸದಸ್ಯರ ಒತ್ತಾಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಸಚಿವರು ತಿಳಿಸಿದರು.


ಎಸ್‌ಐಟಿ ತನಿಖೆಗೆ ಒತ್ತಾಯ: ರಿಂಗರ್ ಲ್ಯಾಕ್ವೇಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಔಷಧಿ ನಿಯಂತ್ರಕರಾದ ಡಾ.ಉಮೇಶ್ ಅವರನ್ನು ಅಮಾನತ್ತುಗೊಳಿಸಲಾಗಿದೆ. ಉಮೇಶ ಅವರು ಇತ್ತೀಚಿಗಷ್ಟೇ ಬಂದಿರುತ್ತಾರೆ. ಈ ಪ್ರಕರಣದ ಹಿಂದೆ ಯಾರಿದ್ದಾರೆಂಬುದನ್ನು ಪತ್ತೆ ಹಚ್ಚಿ ಎಸ್ ಐಟಿ ತನಿಖೆಗೊಳಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸದನಕ್ಕೆ ಸಲಹೆ ಮಾಡಿದರು.


ಡ್ರಗ್ ಮಾಫಿಯಾವನ್ನು ಕಂಟ್ರೋಲ್ ಮಾಡಲು ನಾವೇನು ಅಸಹಾಯಕನಲ್ಲ, ಸರ್ಕಾರ ದೊಡ್ಡದು. ದೊಡ್ಡಮಟ್ಟದ ಅಧಿಕಾರಿಗಳ ಶಕ್ತಿ ಇದೆ. ಪಾರ್ಮಾ ಕಂಪನಿಯವರು ಕೋರ್ಟಿಗೆ ಹೋದರು; ಎಷ್ಟೇ ಪ್ರಭಾವಿಗಳಾಗಿದ್ದರು ಸಹ ಅದನ್ನು ನಾವು ಸಮರ್ಥವಾಗಿ ಎದುರಿಸಬೇಕು ಎಂದು ಸಚಿವರಾದ ಭೋಸರಾಜು ಅವರು ತಿಳಿಸಿದರು.


ಬಳ್ಳಾರಿ, ರಾಯಚೂರ, ಸಿಂಧನೂರ ಸೇರಿದಂತೆ ನಾನಾ ಕಡೆ ಸರಣಿ ಸಾವು ಸಂಭವಿಸಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಮತ್ತಷ್ಟು ಜನರು ಸಾವಿಗೀಡಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ತಪ್ಪಿತಸ್ಥ ಪಾರ್ಮಾ ಕಂಪನಿಗಳ ಮೇಲೆ ಕಠಿಣ ಕಾನೂನು ಕ್ರಮ ವಹಿಸಬೇಕು. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೊಳಪಡಿಸಬೇಕು ಎಂದು ಸಿ.ಟಿ. ರವಿ ಅವರು ಆಗ್ರಹಿಸಿದರು.


ಈ ಸಾವುಗಳು ಸ್ವಾಭಾವಿಕವಲ್ಲ. ಕಳಪೆ ಔಷಧಿಯಿಂದಲೇ ಸಾವಿಗೀಡಾಗಿದ್ದಾರೆ ಎಂಬುದು ಸ್ಪಷ್ಟವಾಗಿದ್ದರಿಂದ ಇನ್ಮುಂದೆ ಕಳಪೆ ಔಷಧಿ ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಂತ್ರಸ್ತ ಮಕ್ಕಳ ಜೀವನೋಪಾಯಕ್ಕೆ ಅನುಕೂಲವಾಗಲು ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕು ಎಂದು ಸದಸ್ಯರಾದ ಭಾರತಿ ಶೆಟ್ಟಿ ಅವರು ಸಲಹೆ ಮಾಡಿದರು.


ಸಿಜೇರಿಯನ್ ಆದ್ಮೆಲೆಯೂ ಬಾಣಂತಿಯರ ಆರಾಮಿದ್ದಾರೆ. ಮಕ್ಕಳಿಗೆ ಹಾಲು ನೀಡಿದ ಬಳಿಕ ಅವರು ತೀರಿದ್ದಾರೆ. ವಿಷಕಾರಿ ದ್ರಾವಣ ಸೇವಿಸಿದ್ದರಿಂದಲೇ ಅವರು ಸಾವನಪ್ಪಿರುವುದು ಸ್ಪಷ್ಟವಾಗುತ್ತದೆ. ಆಸ್ಪತ್ರೆಗಳಲ್ಲಿ ಬಹುತೇಕ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಓದಲು ಬಂದ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸುವುದು ತಪ್ಪಬೇಕು. ಚಿಕಿತ್ಸೆ ಕೊಡುವ ವೇಳೆ ವೈದ್ಯರಿಗೆ ಫೋಟೊ ಹಾಕುವುದು, ಆ ಪೋಟೊ ನೋಡಿ ಸೂಚಿಸುವ ಔಷಧಿ ನೀಡುವುದು ತಪ್ಪಬೇಕು. ಕಠಿಣ ಸಂದರ್ಭದಲ್ಲಿ ವೈದ್ಯರೆ ಸ್ಥಳದಲ್ಲಿದ್ದು ಚಿಕಿತ್ಸೆ ಕೊಡುವ ಕಾರ್ಯವಾಗಬೇಕು ಎಂದು ಸದಸ್ಯರಾದ ಹೇಮಲತಾ ನಾಯಕ ಅವರು ಸಲಹೆ ಮಾಡಿದರು.


ಔಷಧಿಯ ಗುಣಮಟ್ಟ ಪರೀಕ್ಷಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ವಿಷಯದಲ್ಲಿ ಪ್ರಾಮಾಣಿಕತೆ ಕಾಯ್ದುಕೊಳ್ಳಬೇಕು. ಪ್ರಕರಣವನ್ನು ಎಸ್ ಐಟಿ ತನಿಖೆಗೊಳಪಡಿಸಬೇಕು ಎಂದು ಸದಸ್ಯರಾದ ಎನ್ ರವಿಕುಮಾರ ಅವರು ಸಲಹೆ ಮಾಡಿದರು.


ಸದಸ್ಯರಾದ ನವೀನ ಅವರು ಮಾತನಾಡಿ, ಸಹಜ ತೆರಿಗೆಯನ್ನು ತಪ್ಪಿಸಿ ಮಹಿಳೆಯರನ್ನು ಆಸ್ಪತ್ರೆಗೆ ಕರೆತಂದು ಆಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಿಸುವ ಪ್ರಕರಣಗಳು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೆ.40ರಷ್ಟು ನಡೆಯುತ್ತಿವೆ ಎಂದರು. ಈ ಪ್ರಕರಣಗಳ ಬಗ್ಗೆ ನಿಗಾವಹಿಸಿ ಭೇದಿಸಲು ಪ್ರತಿ ಜಿಲ್ಲೆಯಲ್ಲೂ ಟಾಸ್ಕಪೋರ್ಸ ರಚನೆ ಮಾಡಲು ಸಲಹೆ ಮಾಡಿದರು.


ಸದಸ್ಯರಾದ ಟಿ.ಎ.ಶರವಣ ಮಾತನಾಡಿ, ನಮ್ಮ ರಾಜ್ಯದಲ್ಲಿ ಸಹ ಮೆಡಿಕಲ್ ಲಾಬಿ ದೊಡ್ಡಮಟ್ಟದ್ದಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಕಳಪೆ ಔಷಧಿ ಪೂರೈಕೆಗೆ ಪರೋಕ್ಷವಾಗಿ ಸಹಕಾರ ನೀಡುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು. ಸದಸ್ಯರಾದ ಡಾ.ಧನಂಜಯ್ಯ ಸರ್ಜಿ, ಕೇಶವ್ ಪ್ರಸಾದ ಹಾಗೂ ಇನ್ನೀತರರು ಮಾತನಾಡಿ, ಕಳಪೆ ಔಷಧಿ ಸರಬರಾಜಿಗೆ ಸಹಕರಿಸುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು. ತಾಯಂದಿರ ಜೀವ ಬಲಿ ಪಡೆದ ಈ ಪ್ರಕರಣವನ್ನು ಸಮರ್ಥವಾಗಿ ನಿರ್ವಹಿಸಲು ತಜ್ಞರ ಸಮಿತಿ ರಚಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂದು ಸಭೆಗೆ ಸಲಹೆ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button