*ಬಾಣಂತಿಯರು, ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ಬಿಮ್ಸ್ ಗೆ ಭೇಟಿ ನೀಡಿದ ಸಚಿವರು

ಪ್ರಗತಿವಾಹಿನಿ ಸುದ್ದಿ: ಬಾಣಂತಿ – ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ, ಜಿಲ್ಲಾ ಆಸ್ಪತ್ರೆಯಲ್ಲಿ (ಬಿಮ್ಸ್) ಯಾವುದೇ ಕುಂದು ಕೊರತೆಗಳು ಕಂಡು ಬಂದಲ್ಲಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಜೊತೆಗೂಡಿ ಶುಕ್ರವಾರ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗಿಂದು (ಬಿಮ್ಸ್) ಭೇಟಿ ನೀಡಿದ ಸಚಿವರು, ಈ ವೇಳೆ ವಿವಿಧ ಘಟಕಗಳಿಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ನೂತನ ಕಟ್ಟಡಕ್ಕೂ ಸಚಿವರು ಭೇಟಿ ನೀಡಿದರು.

ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು. ಬಾಣಂತಿಯರು ಹಾಗೂ ಹಸಿಗೂಸುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ, ಬಿಮ್ಸ್ ಗೆ ಉತ್ತಮ ಹೆಸರು ತರಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಇದೇ ವೇಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನದ ನವಜಾತ ಹೆಣ್ಣು ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆರೂವರೆ ತಿಂಗಳ ಗರ್ಭಿಣಿ ಕಾಲು ಜಾರಿ ಬಿದ್ದಿದ್ದಾರೆ. ತೀವ್ರ ನೋವಿನ ಕಾರಣಕ್ಕೆ ಬೈಲಹೊಂಗಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್‌ಗೆ ಕರೆ ತರಲಾಗಿತ್ತು. ಮಗುವಿನ ಅಂಗಾಂಗ ಬೆಳವಣಿಗೆ ಆಗಿರಲಿಲ್ಲ, ಆದರೂ ಸಮರ್ಪಕ ಚಿಕಿತ್ಸೆ ನೀಡಲಾಗಿತ್ತು. ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾಯಿ ಪರಾರಿ ಆಗಿದ್ದು ದುರ್ದೈವ. ಈಗಾಗಲೇ ಎಫ್ಐಆರ್ ದಾಖಲಾಗಿದೆ, ತನಿಖೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ರಾಜು ಸೇಠ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಸೀನ್, ಬಿಮ್ಸ್ ನಿರ್ದೇಶಕರಾದ ಅಶೋಕ್ ಶೆಟ್ಟಿ, ಅಧೀಕ್ಷಕರಾದ ಡಾ.ವೀರಣ್ಣ ಪಲ್ಲೆದ್, ಮುಖ್ಯ ಆಡಳಿತಾಧಿಕಾರಿ ಸಿದ್ದು ಹುಲ್ಲಳ್ಳಿ, ಜಿಲ್ಲಾ ಸರ್ಜನ್ ಡಾ.ವಿಠಲ್ ಶಿಂಧೆ, ಶಿಲ್ಪಾ ವಾಲಿ, ಡಾ.ಸರೋಜ ತಗಡಿ, ಡಾ.ಉಮೇಶ್ ಕುಲಕರ್ಣಿ ಸೇರಿದಂತೆ ಹಲವ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ