Kannada NewsKarnataka NewsNationalPolitics

*ಮಹಿಳಾ ವೈದ್ಯರ ಸುರಕ್ಷತೆ ಹೆಚ್ಚಿಸಲು ಕ್ರಮ: ವೈದ್ಯಕೀಯ ಶಿಕ್ಷಣ ಸಚಿವ ಶರಣ್‌ ಪ್ರಕಾಶ್‌*

ಪ್ರಗತಿವಾಹಿನಿ ಸುದ್ದಿ: ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ವೈದ್ಯಾಧಿಕಾರಿಗಳೊಂದಿಗೆ  ಮಂಗಳವಾರ ಸಭೆ ನಡೆಸಿದರು. 

ಕೋಲ್ಕತ್ತಾದಲ್ಲಿ ಇತ್ತೀಚೆಗೆ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಭೆ ನಡೆಸಿದ ಸಚಿವರು, ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತೆ ಹೆಚ್ಚಿಸುವ ಬಗ್ಗೆ ಸಮಾಲೋಚಿಸಿದರು.

ಭದ್ರತಾ ಕ್ರಮಗಳನ್ನು ಹೆಚ್ಚಿಸುವ ಮೂಲಕ ವೈದ್ಯಕೀಯ ವೃತ್ತಿಪರರನ್ನು, ವಿಶೇಷವಾಗಿ ಮಹಿಳೆಯರನ್ನು ರಕ್ಷಿಸಲು ನಮ್ಮ ಸರ್ಕಾರ  ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದ  ಸಚಿವ ಪಾಟೀಲ್, “ಮಹಿಳಾ ವೈದ್ಯರ ಸುರಕ್ಷತೆಗೆ ನಾವು ಬದ್ಧ. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಆಧಾರದ ಮೇಲೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ವಹಿಸಲಾಗುವುದು,” ಎಂದರು. 

 ಸಭೆಯ ನಂತರ ಮಾತನಾಡಿದ ಡಾ. ಶರಣ ಪ್ರಕಾಶ ಪಾಟೀಲ್ , “ಎಲ್ಲಾ ವೈದ್ಯಕೀಯ ಕಾಲೇಜುಗಳು, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನುರಿತ ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿದಂತೆ  ಬೀದಿ ದೀಪಗಳು, ಸಿಸಿಟಿವಿ ಕ್ಯಾಮೆರಾಗಳ ಹೆಚ್ಚಳ ಮುಂತಾದ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ವೈದ್ಯ ಸಿಬ್ಬಂದಿಯ ವಸತಿ ನಿಲಯಗಳ  ಸುರಕ್ಷತೆಗೂ ಆದ್ಯತೆ ನೀಡುತ್ತಿದ್ದೇವೆ. ಈ ಕ್ರಮಗಳು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿರಲಿವೆ,” ಎಂದು ತಿಳಿಸಿದರು.

Home add -Advt

ಪಿಓಎಸ್‌ಹೆಚ್ (ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆಯಡಿ ಸ್ಥಾಪಿಸಲಾದ ಆಂತರಿಕ ದೂರುಗಳ ಸಮಿತಿಯ ಪ್ರಾಮುಖ್ಯತೆಯನ್ನು ವಿವರಿಸಿದ ಸಚಿವರು, “ಈ ಸಮಿತಿಗಳ ಎದುರು ಮಹಿಳೆಯರು ಹೇಳಿಕೊಳ್ಳುವ ಎಲ್ಲಾ ಸಮಸ್ಯೆಗಳನ್ನು ಕಟ್ಟುನಿಟ್ಟಾಗಿ ಪರಿಹರಿಸಲಾಗುತ್ತದೆ,” ಎಂದರು. 

 “ಲೈಂಗಿಕ ದೌರ್ಜನ್ಯದಂಥ ಅಪರಾಧಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ವೈದ್ಯಕೀಯ ವೃತ್ತಿಪರರನ್ನು, ವಿಶೇಷವಾಗಿ ಮಹಿಳೆಯರನ್ನು ರಕ್ಷಿಸುವ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು. 

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ ಸುಜಾತಾ ರಾಥೋಡ್,  ಬಿಎಂಸಿಮತ್ತುಆರ್‌ಐನ ಡೀನ್ ಮತ್ತು ನಿರ್ದೇಶಕ ಡಾ ರಮೇಶ್ ಕೃಷ್ಣ, ಬಿಎಂಸಿಮತ್ತುಆರ್‌ಐನ ಪ್ರಾಂಶುಪಾಲರಾದ ಡಾ ಅಸಿಮಾ ಬಾನ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಸಂಸ್ಥೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button