ನರಸಂಬಂಧಿ ರೋಗದಿಂದ ಬಳಲುತ್ತಿರುವವರಿಗೆ ಕೆ ಎಲ್ ಇಯಲ್ಲಿ ಬೈಪ್ಲೇನ್ ಕ್ಯಾಥಲ್ಯಾಬ್ ಮೂಲಕ ಚಿಕಿತ್ಸೆ ಸೌಲಭ್ಯ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನರಸಂಭಂಧಿ ರೋಗಗಳಿಗೆ ಸಮಗ್ರವಾದ ಅತ್ಯುತ್ತಮವಾದ ಸೇವೆಯನ್ನು ನೀಡಲು ಅತ್ಯಾಧುನಿಕವಾದ ಚಿಕಿತ್ಸಾ ಸೌಲಭ್ಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಹೊಂದಿದೆ. ಅದಕ್ಕನುಗುಣವಾಗಿ ಪಾರ್ಶ್ವವಾಯು ಅಥವಾ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ ತತಕ್ಷಣ ಅದನ್ನು ನಿವಾರಿಸಿ ಜೀವಾಪಾಯವನ್ನು ತಪ್ಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ ಅವರು ಹೇಳಿದರು.
ಕಾಹೇರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನ್ಯುರೋ ವೆಸ್ಕ್ಯುಲರ ಇಂಟರವೇನ್ಶನಲ್ ರೆಡಿಯಾಲಾಜಿ ವಿಭಾಗ ಹಾಗೂ ಇಂಡಿಯನ್ ಸೊಸಾಯಿಟಿ ಆಫ್ ನ್ಯುರೊರೆಡಿಯಾಲಾಜಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಭಾಗಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು ಆದರೆ ಈ ಭಾಗದಲ್ಲಿ ಇದರ ಕೊರತೆ ಎದ್ದು ಕಾಣುತಿತ್ತು. ಇದನ್ನು ಗಮನಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಪ್ರತ್ಯೇಕವಾದ ಬೈಪ್ಲೇನ್ ಕ್ಯಾಥಲ್ಯಾಬ ತೆರೆದು, ನರರೋಗದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
30 ವರ್ಷಗಳಲ್ಲಿ ವೈದ್ಯಕೀಯ ತಂತ್ರಜ್ಞಾನ ಸಾಕಷ್ಟು ಅಭಿವೃದ್ದಿಗೊಂಡಿದ್ದು, ಅವುಗಳನ್ನು ಉ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ಕಲ್ಪಿಸಲು ಕೆಎಲ್‌ಇ ಸಂಸ್ಥೆಯು ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಮುಖ್ಯವಾಗಿ ಬೈಪ್ಲೇನ ಕ್ಯಾಥಲ್ಯಾಬ ಕೂಡ ಒಂದು. ಅನೇಕ ಸಂದರ್ಭಗಳಲ್ಲಿ ನರ ಸಂಬಂಧಿ ರೋಗಗಳಿಂದ ವ್ಯಕ್ತಿಯು ತೊಂದರೆಗೀಡಾದಾಗ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರಿಂದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ ಎಂದರು.
ಇಂಡಿಯನ್ ಸೊಸಾಯಿಟಿ ಆಫ್ ನ್ಯುರೋರೆಡಿಯಾಲಾಜಿಯ ಅಧ್ಯಕ್ಷರಾದ ಡಾ. ಶೈಲೇಶ ಗಾಯಕವಾಡ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಾರ್ಶ್ವವಾಯು ಕುರಿತು ಅರಿವು ಕಡಿಮೆ ಇದ್ದು, ಇದರಿಂದ ಶಾಶ್ವತ ಅಂಗವಿಕಲತೆ ಅತವಾ ಸಾವು ಸಂಭವಿಸುವೆ. ಅದನ್ನು ತಡೆಗಟ್ಟಲು ಸಮಗ್ರವಾದ ಯೋಜನೆ ರೂಪಿಸಿ, ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಆಗಬೇಕು. ಪಾರ್ಶ್ವವಾಯು ಉಂಟಾದಾಗ ಜನರು ಅನೇಕ ರೀತಿಯ ಔಷಧೋಪಚಾರ ಮಾಡುತ್ತಿದ್ದು, ಇದರಿಂದ ಗುಣಮುಖರಾಗುವದು ಕಡಿಮೆ. ಆದ್ದರಿಂದ ಅತ್ಯಾಧುನಿಕ ತಂತ್ರಜ್ಞಾನದಿಂದ ಪಾರ್ಶವಾಯು ರೋಗವನ್ನು ಸಾಧ್ಯವಾದ ಮಟ್ಟಿಗೆ ಗುಣಪಡಿಸಲು ಸಾಧ್ಯವೆಂಬುದನ್ನು ತಿಳಿಸಬೇಕು. ಪಾರ್ಶ್ವವಾಯು ಉಂಟಾದಾಗ ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಹೇರನ ಉಪಕುಲಪತಿ ಡಾ. ನಿತಿನ ಗಂಗಾಣೆ, ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಜೆಎನ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಡಿ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ, ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡಾ. ರಾಜೇಶ ಪವಾರ, ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ, ಐಎಸ್‌ಎನ್‌ಆರ್ ಉಪಾಧ್ಯಕ್ಷರಾದ ಡಾ. ರೋಜ್ ದವನ ಭರತ, ಡಾ. ವಿರುಪಾಕ್ಷ ಹಟ್ಟಿಹೊಳಿ, ಡಾ. ನವೀನ ಮೂಲಿಮನಿ, ಡಾ. ಅಭಿನಂದನ ರೂಗೆ, ಡಾ. ಈರಣ್ಣ ಹಿತ್ತಲಮನಿ, ಡಾ. ಅಭಿಮಾನ ಬಾಲೋಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ