ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತರು ಭಿನ್ನಮತ ಶುರು ಮಾಡಿದ್ದು, ಇಂದು ರಾತ್ರಿ ಸಭೆ ಸೇರಲು ನಿರ್ಧರಿಸಿದ್ದಾರೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ರಾತ್ರಿ ಸಭೆ ನಡೆಯಲಿದೆ ಎಂದು ಗೊತ್ತಾಗಿದೆ.
ರಮೇಶ ಜಾರಕಿಹೊಳಿ ನೇತೃತ್ವದಲ್ಲಿ 17 ಶಾಸಕರು ಕಾಂಗ್ರೆಸ್ – ಜೆಡಿಎಸ್ ತೊರೆದು ಬಿಜೆಪಿಗೆ ಬಂದು ಬಿಜೆಪಿ ಸರಕಾರ ರಚನೆಗೆ ಕಾರಣರಾಗಿದ್ದರು. ಇವರಲ್ಲಿ ಕೆಲವರಿಗೆ ಹಿಂದಿನ ಯಡಿಯೂರಪ್ಪ ಸರಕಾರದಲ್ಲಿ ಸಚಿವಸ್ಥಾನ ಸಿಕ್ಕಿರಲಿಲ್ಲ. ಇನ್ನು ಕೆಲವರನ್ನು ಈಗ ಕೈ ಬಿಡಲಾಗಿದೆ.
ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದರು. ಪ್ರಕರಣ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ತಮ್ಮ ಬದಲು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವಸ್ಥಾನ ನೀಡುವಂತೆ ಅವರು ಕೋರಿದ್ದರು ಎನ್ನಲಾಗಿದೆ. ಆದರೆ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಸ್ಥಾನ ನೀಡಲಾಗಿಲ್ಲ. ಇದಲ್ಲದೆ ಆರ್.ಶಂಕರ, ಮಹೇಶ ಕುಮಟಳ್ಳಿ ಸೇರಿದಂತೆ ಕೆಲವರನ್ನು ಹೊರಗಿಡಲಾಗಿದೆ.
ಇದರ ಜೊತೆಗೆ ಮೂಲ ಬಿಜೆಪಿಯ ಕೆಲವು ಹಿರಿಯರನ್ನೂ ಸಚಿವಸಂಪುಟದಿಂದ ಕೈಬಿಡಲಾಗಿದೆ. ಅವರು ಕೂಡ ಅಸಮಾಧಾನಗೊಂಡಿದ್ದಾರೆ.
ಅತೃಪ್ತರೆಲ್ಲ ಸೇರಿ ಇಂದು ರಾತ್ರಿ ಸಭೆ ನಡೆಸಿ, ಚರ್ಚಿಸಲು ಮುಂದಾಗಿದ್ದಾರೆ. ಆದರೆ ವಲಸೆ ಬಂದವರಷ್ಟೆ ಸಭೆ ನಡೆಸುತ್ತಾರೋ, ಮೂಲ ಬಿಜೆಪಿಗರೂ ಇದರಲ್ಲಿ ಭಾಗಿಯಾಗಲಿದ್ದಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಬೊಮ್ಮಾಯಿ ಸಚಿವಸಂಪುಟದ ಸದಸ್ಯರಿಗೆ ಇಂದು ಅಥವಾ ನಾಳೆ ಖಾತೆ ಹಂಚಿಕೆ ನಡೆಯಲಿದೆ. ಆ ಸಂದರ್ಭದಲ್ಲೂ ಕೆಲವರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ.
ಇವನ್ನೆಲ್ಲ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ಯಾವ ರೀತಿ ನಿಭಾಯಿಸುತ್ತದೆ ಕಾದು ನೋಡಬೇಕಿದೆ.
ಬೊಮ್ಮಾಯಿ ಮುಂದಿರುವ 5 ಸವಾಲುಗಳೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ